Advertisement

ತಾಲಿಬಾನಿಗಳಿಗಿರುವುದು ಮತಾಂಧತೆ; ಕಾಂಗ್ರೆಸ್ ನವರಿಗಿರುವುದು ಮತದ ಅಂಧತೆ: ಸಿ.ಟಿ ರವಿ

12:38 PM Jan 02, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನವರು ಗೋಹತ್ಯೆ ನಿಷೇಧ, ಮತಾಂತರ, ದೇವಸ್ಥಾನಗಳಿಗೆ ಸ್ವಾತಂತ್ರ್ಯ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಾಲಿಬಾನಿಗಳಿಗೆ ಇರುವುದು ಮತಾಂಧತೆ ಕಾಂಗ್ರೆಸ್ ನವರಿಗೆ ಇರುವುದು ಮತದ ಅಂಧತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು ಎನ್ನುವ ಮನಸ್ಥಿತಿ ಇಲ್ಲ. ಅವರು ಯಾವಾಗಲೂ ನಕಾರಾತ್ಮಕವಾಗಿಯೇ ನೋಡುತ್ತಾರೆ. ಬ್ರಿಟಿಷರು ದೇವಾಲಯಗಳ ಆದಾಯದ ಮೇಲೆ ಕಣ್ಣಿಟ್ಟು ಅವುಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಆದರೂ ದೇವಸ್ಥಾನಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ದೇವಸ್ಥಾನ ಮುಟ್ಟಿದರೆ ಭಸ್ಮವಾಗುತ್ತೀರಿ ಎಂದಧ್ದಾರೆ. ಅವರು ವಸಿಷ್ಠರೂ ಅಲ್ಲ, ವಿಶ್ವಾಮಿತ್ರರೂ ಅಲ್ಲ.  ಅವರು ಭಸ್ಮಾಸುರ ಆಗಿದ್ದರೆ ಅವರನ್ನೇ ಭಸ್ಮ ಮಾಡುವುದು ಹೇಗೆಂದು ನಮಗೆ ಗೊತ್ತು. ಅವರೇ ಸಿಬಿಐ, ಇಡಿ ಬಲೆಯಲ್ಲಿ ಸಿಲುಕಿದ್ದಾರೆ.  ಬೇಲ್ ರದ್ದಾದರೆ, ಮತ್ತೆ ಒಳಗೆ ಹೋಗಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಬಲವಂತದ ಮತಾಂತರಕ್ಕೆ ಬೆಂಬಲ ನಿಡುತ್ತಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಲಿ. ಜಾತ್ಯಾತೀಯತೆ ಹೆಸರಿನಲ್ಲಿ ಹಿಂದುಗಳ ಮೇಲೆ ದಾಳಿ ಸಹಿಸುವುದಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಯಾಕೆ ಹೆಗಲು ಮುಟ್ಟಿಕೊಳ್ಳುತ್ತಾರೆ. ಇದು ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಲ್ಲ. ಸೋನಿಯಾ ಗಾಂಧೀಜಿ ಕಾಂಗ್ರೆಸ್.  ಗಾಂಧಿ ಅಂಬೇಡ್ಕರ್ ಬಲವಂತದ ಮತಾಂತರ ವಿರೋಧಿಸಿದ್ದರು. ಅಂಬೇಡ್ಕರ್ ಮತಾಂತರ ಹೊಂದಲು ಬಯಸಿದಾಗ ಪೋಪ್, ಮುಸ್ಲಿಂ ಧರ್ಮಗುರುಗಳು ಆಹ್ವಾನ ನೀಡಿದ್ದರು. ಆದರೆ ಅಂಬೇಡ್ಕರ್ ಅದನ್ನು ತಿರಸ್ಕಿರಿ ನನ್ನ ಸಾಂಸ್ಕೃತಿಕ ಹಕ್ಕನ್ನು ಕಳೆದುಕೊಳ್ಳುತ್ತೆನೆ ಎಂದು ಬೌದ್ದ ಧರ್ಮಕ್ಕೆ ಸೇರಿದರು ಎಂದರು.

ಇದನ್ನೂ ಓದಿ:ಮಸೀದಿ ಹಣದ ವಿಚಾರದಲ್ಲಿ ಜೀವಬೆದರಿಕೆ: ವಿಮಾನ ನಿಲ್ದಾಣದಲ್ಲಿ ಆರೋಪಿ ವಶಕ್ಕೆ

ಕಾಂಗ್ರೆಸ್ 2018, ,2019 ರ ಚುನಾವಣೆ ಫಲಿತಾಂಶವನ್ನು ಒಮ್ಮೆ ನೋಡಿ, ಭ್ರಷ್ಟ ವ್ಯವಸ್ಥೆಯನ್ನು ಜನರು ಈಗ ಬೆಂಬಲಿಸುವ ಮನಸ್ಥಿತಿಯಲ್ಲಿಲ್ಲ. ನಮ್ಮನ್ನು ಚಹಾ ಮಾರುವ ಪಕ್ಷ ಎಂದು ಲೇವಡಿ ಮಾಡುತ್ತಿದ್ದರು. ಈಗ ಟಿ ಮಾರುವವರನ್ನೇ ಎರಡು ಬಾರಿ ದೇಶದ ಪ್ರಧಾನಿ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಧ್ಯಕ್ಷರು ಮುಖ್ಯವೋ, ಪ್ರತಿಪಕ್ಷದ ನಾಯಕ ಮುಖ್ಯವೊ ಎನ್ನುವುದು ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಬಿಟ್ಟು ಡಿಕೆಶಿಗೆ ಒಂದು ಸಭೆ ಮಾಡುವ ಸ್ವಾತಂತ್ರ್ಯವೂ ಇಲ್ಲವೇ ಎಂದು ಟೀಕಿಸಿದರು.

Advertisement

ಮೇಕೆದಾಟು ಯೋಜನೆಗೆ ಪಾದಯಾತ್ರೆ ಗದ್ದುಗೆ ಗುದ್ದಾಟಕ್ಕೂ ನಡೆಸುತ್ತಾರೆ.  ಆರೋಗ್ಯ ಸುಧಾರಣೆಗೆ ಪಾದಯಾತ್ರೆ ಮಾಡಿದರೆ ತೊಂದರೆ ಇಲ್ಲ. ಸುಳ್ಳು ಹೇಳಿಕೊಂಡು ಪಾದಯಾತ್ರೆ ಮಾಡಬಾರದು. ಡಿಕೆಶಿ ಡಿಪಿಆರ್ ತಮ್ಮ ಅವಧಿಯಲ್ಲಿ ಆಗಿದೆ ಅಂತಾರೆ ಆರು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು. ರಾಜ್ಯ ಸರ್ಕಾರ ಕೇಂದ್ರ ಜಲ ಶಕ್ತಿ ಇಲಾಖೆ ಜೊತೆ ಮಾಡಿ ಯೋಜನೆ ಜಾರಿಗೆ ಪ್ರಯತ್ನ ನಡೆಸಿದ್ದೇವೆ.ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಪರಿಸರ ಇಲಾಖೆಯ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಾರ ವಿರುದ್ಧ ಯಾವ ಉದ್ದೇಶಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಎರಡುವರೆ ವರ್ಷದಲ್ಲಿ ರಾಜ್ಯ ಸರ್ಕಾರ ಏನು ಮಾಡಿದೆ ಅಂತ ವಿಧಾನ ಮಂಡಲದಲ್ಲಿ ಕೇಳಲಿಲ್ಲ. ಸರ್ಕಾರ ಸಮಗ್ರ ಯೋಜನಾ ವರದಿಯನ್ನು ಅಪ್ ಲೊಡ್ ಮಾಡಿದೆ. ಆದರೂ ಅವರ ಉದ್ದೇಶ ಏನಿದೆ. ಹೋರಾಟ ಮಾಡುವುದು ತಪ್ಪಲ್ಲ. ಸಿದ್ದರಾಮಯ್ಯ ನ ವಿರುದ್ಧ ಮೇಲುಗೈ ಸಾಧಿಸಲು ಪಾದಯಾತ್ರೆ ಮಾಡುತ್ತಿದ್ದೇನೆ ಅಂತ ಹೇಳಲಿ.

ಪಕ್ಷದ ನಾಯಕತ್ವ ಯಾರದು ಎನ್ನುವುದು ಸಂಸದೀಯ ಮಂಡಳಿ ನಿರ್ಣಯ ಮಾಡುತ್ತದೆ.ಸಂಪುಟ ಪುನಾರಚನೆ ಕುರಿತು ಬೈಠಕ್ ನಲ್ಲಿ ಚರ್ಚೆ ಮಾಡುತ್ತೇವೆ. ಚುನಾವಣೆ ಸೋಲಿನ ಕುರಿತು ಚರ್ಚೆ ಮಾಡುತ್ತೇವೆ. ನಾವು ಐದಾರು ಸಾರಿ ಸೊತು ಒಂದೇ ಕುಟುಂಬಕ್ಕೆ ಜೋತು ಬಿದ್ದು ಕುಳಿತಿಲ್ಲ. ಸಚಿವ ಸ್ಥಾನ ಬಿಡುವುದು ತ್ಯಾಗವೂ ಅಲ್ಲ ಬಲಿದಾನವೂ ಅಲ್ಲ. ಇದು ಪಕ್ಷ ವಹಿಸುವ ಜವಾಬ್ದಾರಿ ಪಕ್ಷ ಯಾರಿಗೆ ಸೂಚನೆ ನೀಡುತ್ತದೆಯೋ ಅವರು ಅದರಂತೆ ನಡೆದುಕೊಳ್ಳುತ್ತಾರೆ. ನಾನು ಯಾವುದೇ ಹುದ್ದೆಯ ರೇಸ್ ನಲ್ಲಿ ಇಲ್ಲ. ಪಕ್ಷ ನೀಡುವ ಜಬಾಬ್ದಾರಿ ಮಾತ್ರ ನಿರ್ವಹಿಸುತ್ತೇನೆ ಎಂದರು.

ಡಿಕೆಶಿ – ಎಚ್ ಡಿಕೆ ಯಾವಾಗ ಏನು ಮಾಡುತ್ತಾರೆ ಏನ್ನುವುದು ಗೊತ್ತಿಲ್ಲ. ಇಬ್ಬರು ಜೋಡೆತ್ತು ಅಂದುಕೊಂಡಿದ್ದರು. ಈಗ ಇಬ್ಬರೂ ಕಣಿ ಹರಿದುಕೊಂಡಿದ್ದಾರಾ, ಯಾರು ಉಪ್ಪು ತಿಂದಿದ್ದಾರೊ ಅವರು ನೀರು ಕುಡಿಯಲೇಬೇಕು. ಇದಕ್ಕೆ ಡಿಕೆಶಿ ಕಾಂಗ್ರೆಸ್ ನಾಯಕರೇನು ಹೊರತಲ್ಲ. ಅವರೇನು ನಿತ್ಯ ಪತಿವೃತೆಯರಲ್ಲ ಎಂದು ಸಿ ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next