ಕುಷ್ಟಗಿ: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಏಕೈಕ ಆಕಾಂಕ್ಷಿ ಎಂಬುದಾಗಿತ್ತು. ಆದರೆ ಸದ್ಯದ ಬೆಳವಣಿಗೆಯಲ್ಲಿ ಮತ್ತೋರ್ವ ಮುಖಂಡ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿತರಾಗಿದ್ದಾರೆ.
ಕೆಬಿಜೆ ಎನ್ ಎಲ್ ನಿವೃತ್ತ ಪ್ರಧಾನ ಇಂಜಿನಿಯರ್ ಪ್ರಭಾಕರ ಚಿಣಿ ಟಿಕೆಟ್ ಆಕಾಂಕ್ಷಿಯಾಗಿ ಎಂದು ಗುರುವಾರ ಬೆಂಗಳೂರಿನಲ್ಲಿ ಪಕ್ಷದ ಕಾರ್ಯದರ್ಶಿ ನಾರಾಯಣ ಅವರಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಪರಶುರಾಮ ನಾಗರಾಳ, ಚಂದಪ್ಪ ತಳವಾರ, ಹನುಮಂತಪ್ಪ ಚೌಡಕಿ, ಅಶೋಕ ಬಳೂಟಗಿ, ಸಯ್ಯದಸಾಬ್ ಅತ್ತಾರ, ಪುರಸಭೆ ಕಾಂಗ್ರೆಸ್ ಸದಸ್ಯ ವಸಂತ ಮೇಲಿನಮನಿ, ಯಲ್ಲಪ್ಪ ಗದ್ದಿ,ಚಂದಪ್ಪ ಹೊಟ್ಟಿ, ಶಂಕ್ರಯ್ಯ ಕಂಪಾಪೂರಮಠ, ಪುರಸಭೆ ಪಕ್ಷೇತರ ಸದಸ್ಯ ಅಂಬಣ್ಣ ಭಜಂತ್ರಿ, ವೀರೇಶ ಬಂಗಾರಶೆಟ್ಟರ್ ಮತ್ತಿತರರಿದ್ದರು.
ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕುಷ್ಟಗಿ ವಿಧಾನಸಭಾ ಕ್ಷೇತ್ರ ಕ್ಕೆ ಪ್ರಭಾಕರ ಚಿಣಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು ಎಂದು ಪರಶುರಾಮ ನಾಗರಾಳ ತಿಳಿಸಿದ್ದಾರೆ. ಕಳೆದ ಬುಧವಾರ ಕಾಂಗ್ರೆಸ್ ಭಿನ್ನಮತೀಯ ಈ ಗುಂಪಿನ ಸದಸ್ಯರು ಬೆಂಗಳೂರಿಗೆ ಹೋಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ಸಂಚಲನಕ್ಕೆ ಕಾರಣವಾಗಿದೆ.