Advertisement

ಬೂದಿ ಮುಚ್ಚಿದ ಕೆಂಡವಾಗಿರುವ ಕಾಂಗ್ರೆಸ್‌

03:15 PM Nov 24, 2021 | Team Udayavani |

ಕೋಲಾರ: ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ ಎಂ.ಎಲ್‌.ಅನಿಲ್‌ಕುಮಾರ್‌ಗೆ ಟಿಕೆಟ್‌ ನೀಡಿದ್ದು, ಇದರ ಅಸಮಾಧಾನ ಕಾಂಗ್ರೆಸ್‌ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿಗೆ ಕಾರಣವಾಗಿದೆ.

Advertisement

ಹಿಂದಿನ ಚುನಾವಣೆಯಲ್ಲಿ ಕೆ.ಎಚ್‌.ಮುನಿ ಯಪ್ಪ ಬೆಂಬಲಿತ ಅಭ್ಯರ್ಥಿಯಾಗಿ ಇದೇ ಚುನಾವಣೆ ಸ್ಪರ್ಧಿಸಿ ಪರಾಭವಗೊಂಡಿದ್ದ ಅನಿಲ್‌ಕುಮಾರ್‌, ಈ ಬಾರಿ ಬಣ ಬದಲಾಯಿಸಿ ರಮೇಶ್‌ಕುಮಾರ್‌ ಮತ್ತು ಇತರೇ ಹಾಲಿ, ಮಾಜಿ ಶಾಸಕರ ತಂಡದ ಸರ್ವಸಮ್ಮತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಅನಿಲ್‌ಗೆ ವಿರೋಧ: ಕೆ.ಎಚ್‌.ಮುನಿಯಪ್ಪ ಬಣವು ಇದರಿಂದ ಕೆಂಡಾಮಂಡಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಸ್‌.ಮುನಿಸ್ವಾಮಿ ಗೆಲ್ಲಿಸಲು ಪ್ರತ್ಯಕ್ಷವಾಗಿಯೇ ಶ್ರಮಿಸಿದ ಅನಿಲ್‌ಕುಮಾರ್‌ಗೆ ಟಿಕೆಟ್‌ ನೀಡಬಾರದೆಂದು ಕೆ.ಎಚ್‌.ಮುನಿಯಪ್ಪ ಬಣದ ಮುಖಂಡರು ಪಕ್ಷದ ಹೈಕಮಾಂಡ್‌ ಅನ್ನು ಒತ್ತಾಯಿಸುತ್ತಲೇ ಇದ್ದರು.

ಇದಕ್ಕಾಗಿ ಒಂದು ವಾರದಿಂದಲೂ ಸತತವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿದ್ದರು. ಒಂದು ಹಂತದಲ್ಲಿ ಅನಿಲ್‌ಕುಮಾರ್‌ಗೆ ಟಿಕೆಟ್‌ ಖಚಿತವಾಗುತ್ತಿದ್ದಂತೆಯೇ ಕೆ.ಎಚ್‌.ಮುನಿಯಪ್ಪ ಬಣದ ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಅನಿಲ್‌ಕುಮಾರ್‌ ಮತ್ತು ಬ್ಯಾಲಹಳ್ಳಿ ಗೋವಿಂದಗೌಡರಿಗೆ ಟಿಕೆಟ್‌ ನೀಡಬಾರದೆಂದು ಹೈಕ ಮಾಂಡ್‌ ಅನ್ನು ಬಹಿರಂಗವಾಗಿಯೇ ಆಗ್ರಹಿಸಿದ್ದರು.

ಸುದರ್ಶನ್‌ ಪರ ಲಾಬಿ: ಅನಿಲ್‌ಕುಮಾರ್‌ಗೆ ಟಿಕೆಟ್‌ ಖಚಿತವಾಗುತ್ತಿರುವುದು ದೃಢಪಡುತ್ತಿದ್ದಂತೆಯೇ ಕೆ. ಎಚ್‌.ಮುನಿಯಪ್ಪ ಬಣವು ತಮ್ಮ ಬಣಕ್ಕೂ ಸೇರದ, ರಮೇಶ್‌ಕುಮಾರ್‌ ಬಣಕ್ಕೂ ಸೇರದ ಕಾಂಗ್ರೆಸ್‌ ಪಕ್ಷದ ಹಿರಿಯನಾಯಕ ವಿ.ಆರ್‌.ಸುದರ್ಶನ್‌ಗೆ ಟಿಕೆಟ್‌ ನೀಡಬೇಕೆಂಬ ವಾದವನ್ನು ಮಂಡಿಸಿದ್ದರು.

Advertisement

ಇದನ್ನೂ ಓದಿ:- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ

ಇದಕ್ಕಾಗಿ ಕೆ. ಎಚ್‌.ಮುನಿಯಪ್ಪ ನವದೆಹಲಿಯಲ್ಲಿಯೂ ಲಾಬಿ ನಡೆಸಿದ್ದರು. ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸದಸ್ಯರಾಗಿ ಆಯ್ಕೆಯಾದರೆ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ನಾಯಕತ್ವ ಸಿಗುತ್ತದೆ ಎಂದು ಲೆಕ್ಕಾಚಾರವೂ ಇತ್ತು. ಆದರೆ, ಕಾಂಗ್ರೆಸ್‌ ಪಕ್ಷವು ಇದ್ಯಾವುದಕ್ಕೂ ಕಿವಿಕೊಟ್ಟಿರಲಿಲ್ಲ. ಆದರೆ, ಕೆ.ಎಚ್‌.ಮುನಿಯಪ್ಪ ಮತ್ತವರ ಬೆಂಬಲಿತ ಮುಖಂಡರ ಮಾತಿಗೆ ಮನ್ನಣೆ ನೀಡದ ಹೈಕಮಾಂಡ್‌ ಅಂತಿಮವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲಿ, ಮಾಜಿ ಶಾಸಕರ ಒತ್ತಾಯದಂತೆ ಅನಿಲ್‌ ಕುಮಾರ್‌ಗೆ ಟಿಕೆಟ್‌ ಖಾತರಿ ಮಾಡಿದ್ದರು. ಈ ಬೆಳವಣಿಗೆ ಕಾಂಗ್ರೆಸ್‌ ಪಕ್ಷದ ಆಂತರಿಕ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಕೆ.ಎಚ್‌.ಎಂ ನಿವಾಸದಲ್ಲಿ ಸಭೆ: ಅನಿಲ್‌ಕುಮಾರ್‌ಗೆ ಟಿಕೆಟ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಮುಖಂಡರು ಹಾಗೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದವರು ಬೆಂಗಳೂರಿನ ಕೆ.ಎಚ್‌.ಮುನಿಯಪ್ಪ ಮನೆಯಲ್ಲಿ ಸಭೆ ಸೇರಿ ಚರ್ಚಿಸಿದರು. ಈ ಸಭೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿ.ಆರ್‌.ಸುದರ್ಶನ್‌ ನಾಮಪತ್ರ ಸಲ್ಲಿಸುವ ಕುರಿತಂತೆಯೂ ಚರ್ಚೆಯಾಗಿದೆ.

ಪ್ರಯತ್ನ ವಿಫ‌ಲ: ಸುದರ್ಶನ್‌ ನಾಮಪತ್ರ ಸಲ್ಲಿಸುವುದು, ಆನಂತರ ನಾಮಪತ್ರ ವಾಪಸಾತಿ ಅವಧಿಯೊಳಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಸುದರ್ಶನ್‌ ಪರ ಮತ್ತೂಂದು ಸುತ್ತಿನ ಲಾಬಿ ನಡೆಸಿ ಅಧಿಕೃತ ಅಭ್ಯರ್ಥಿಯಾಗಿಸುವ ಚಿಂತನೆಯೂ ನಡೆಯಿತು. ಆದರೆ, ಸುದರ್ಶನ್‌ ತಾವು ಪಕ್ಷದ ಹಿರಿಯ ನಾಯಕರಾಗಿದ್ದು, ಒಮ್ಮೆ ನಾಮಪತ್ರ ಸಲ್ಲಿಸಿದರೆ ಅದನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಈ ಪ್ರಯತ್ನ ವಿಫ‌ಲಯಾಯಿತು.

ದೆಹಲಿಯತ್ತ ಕೆಎಚ್‌ಎಂ: ಕೋಲಾರದಲ್ಲಿ ಅನಿಲ್‌ ಕುಮಾರ್‌ ನಾಮಪತ್ರ ಸಲ್ಲಿಸಿ ತಮಗೆ ಕೆ.ಎಚ್‌.ಮುನಿ ಯಪ್ಪ ಮತ್ತು ವೀರಪ್ಪ ಮೊಯ್ಲಿ ಸೇರಿದಂತೆ ಎಲ್ಲಾ ಮುಖಂಡರ ಬೆಂಬಲ ಇದೆ. ಪಕ್ಷದಲ್ಲಿ ಯಾವುದೇ ಗೊಂದಲ ಇದೆ ಎಂಬ ಹೇಳಿಕೆ ನೀಡಿದರು. ಇದೇ ವೇಳೆಗೆ ಕೆ.ಎಚ್‌.ಮುನಿಯಪ್ಪ ನಿವಾಸದಲ್ಲಿ ಸೇರಿದ್ದ ಮುಖಂಡರ ಸಭೆ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲಾಗದೆ ಕೊನೆಗೊಂಡಿತು.

ಸಭೆಯ ನಂತರ ಕೆ.ಎಚ್‌.ಮುನಿಯಪ್ಪ ದೆಹಲಿಯತ್ತ ಪ್ರಯಾಣ ಬೆಳೆಸುವ ಇಂಗಿತ ವ್ಯಕ್ತಪಡಿಸಿ, ಅನಿಲ್‌ಕುಮಾರ್‌ಗೆ ಟಿಕೆಟ್‌ ಖಾತ್ರಿಪಡಿಸಿದ ನಂತರದ ಎಲ್ಲಾ ಬೆಳವಣಿಗೆಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಅಂತಿಮವಾಗಿ ನಿರ್ಧಾರಕ್ಕೆ ಬರಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.

ಆಕಾಂಕ್ಷಿಗಳ ಅಸಮಾಧಾನ: ವಿಧಾನ ಪರಿಷತ್‌ ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇತರರಿಗೂ ಪಕ್ಷದ ತೀರ್ಮಾನ ಅಸಮಾಧಾನ ಮೂಡಿಸಿದೆ. ಕಾಂಗ್ರೆಸ್‌ ಪಕ್ಷದ ಪರ ಅನಿಲ್‌ಕುಮಾರ್‌ ನಾಮಪತ್ರ ಸಲ್ಲಿಕೆ ವೇಳೆ ಈ ಮುಖಂಡ ಗೈರು ಹಾಜರಿ ಎದ್ದು ಕಾಣಿಸುತ್ತಿತ್ತು.

ಜಿಲ್ಲಾ ಕಾಂಗ್ರೆಸ್‌ ಅನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಚಂದ್ರಾರೆಡ್ಡಿ ವಿಧಾನಪರಿಷತ್‌ ಟಿಕೆಟ್‌ ಸಿಕ್ಕೇ ಸಿಗುತ್ತದೆಂಬ ನಂಬಿಕೆ ಇಟ್ಟುಕೊಂಡಿದ್ದರು. ಹಾಗೆಯೇ ಬ್ಯಾಲಹಳ್ಳಿ ಗೋವಿಂದಗೌಡ ಪರಿಷತ್‌ ಸದಸ್ಯರಾಗುವ ಪ್ರಯತ್ನ ನಡೆಸಿದ್ದರು. ಆದರೆ, ಕಾಂಗ್ರೆಸ್‌ ಪಕ್ಷದ ಬಣಗಳ ನಡುವಿನ ಆಂತರಿಕ ಕಿತ್ತಾಟ ಈ ಇಬ್ಬರ ಪ್ರಯತ್ನವನ್ನು ಮುಸುಕಾಗಿಸಿತು.

 ಬಿಜೆಪಿಯತ್ತ ಕೆಲ ಕಾಂಗ್ರೆಸ್‌ ಮುಖಂಡರ ಒಲವು

ಕಾಂಗ್ರೆಸ್‌ ಪಕ್ಷದ ಆಂತರಿಕ ಕಿತ್ತಾಟದಿಂದ ನೊಂದಿರುವ ಅನೇಕ ಮುಖಂಡರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರುವ ಕುರಿತು ಚಿಂತನೆ ನಡೆಸುತ್ತಿರುವುದು ರಾಜಕೀಯ ಹೊಸ ಬೆಳವಣಿಗೆಯಾಗಿದೆ. ಈಗಾಗಲೇ ಕೆಲವು ಕಾಂಗ್ರೆಸ್‌ ಮುಖಂಡರು ಒಂದು ತಂಡವಾಗಿ ಬಿಜೆಪಿ ಸೇರುವ ಕುರಿತು ಆ ಪಕ್ಷದ ಮುಖಂಡರೊಂದಿಗೆ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಬಿಜೆಪಿ ಸೇರಿದ ನಂತರದ ಆಗುಹೋಗುಗಳ ಕುರಿತು ಕೆಲವು ಕಾಂಗ್ರೆಸ್‌ ಮುಖಂಡರು ಪರಾಮರ್ಶೆ ನಡೆಸುತ್ತಿದ್ದಾರೆ. ಎಲ್ಲವೂ ಸರಿ ಹೋದಲ್ಲಿ ವಿಧಾನಪರಿಷತ್‌ ಚುನಾವಣಾ ಹೊಸ್ತಿಲಲ್ಲಿಯೇ ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರಲಿದ್ದಾರೆ. ಇಲ್ಲವೇ ವಿಧಾನಪರಿಷತ್‌ ಚುನಾವಣೆಯ ನಂತರ ಒಂದಷ್ಟು ಪ್ರಭಾವಿ ಮುಖಂಡರು ಬಿಜೆಪಿಯತ್ತ ವಲಸೆ ಹೋಗುವ ಸಾಧ್ಯತೆಗಳಿವೆ.

ಬಿಜೆಪಿ ಬಲಹೀನವಾಗಿರುವ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ವಿಧಾನಸಭಾ ಚುನಾವಣೆಗೆ ನಿಲ್ಲುವ ಖಾತರಿ ಕುರಿತಂತೆಯೂ ಕಾಂಗ್ರೆಸ್‌ ಮುಖಂಡರು ಬಿಜೆಪಿಯೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಇವೆಲ್ಲವೂ ಅಂತಿಮವಾದರೆ ಕಾಂಗ್ರೆಸ್‌ ದೊಡ್ಡ ಗುಂಪೊಂದನ್ನು ಕಳೆದುಕೊಳ್ಳುತ್ತದೆಯೆಂದು ಹೇಳಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್‌ ಈ ಕುರಿತು ಮಾರ್ಮಿಕವಾಗಿ ಹೇಳಿಕೆಯೊಂದನ್ನು ನೀಡಿ, ಈ ಸದ್ಯಕ್ಕೆ ಬಿಜೆಪಿ ಯಾವ ನಿರ್ಧಾರಕ್ಕೂ ಬಂದಿಲ್ಲ, ನಾಮಪತ್ರ ವಾಪಸಾತಿಗೆ ಇನ್ನೂ ಮೂರು ದಿನ ಬಾಕಿ ಇದೆ. ಈ ಮೂರು ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು ಎಂದಿರುವುದು ಜೆಡಿಎಸ್‌ನೊಂದಿಗಿನ ಮೈತ್ರಿಗೋ ಅಥವಾ ಕಾಂಗ್ರೆಸ್‌ ಮುಖಂಡರ ಸೆಳೆಯಲೋ ಕಾದು ನೋಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next