ಬೆಂಗಳೂರು: ಟೊಮೆಟೊ ಏಜೆಂಟುಗಳು ಸಿದ್ದರಾಮಯ್ಯರನ್ನು ಸೋಲಿಸಲು ಬಂದಿದ್ದಾರೆ’ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ವಕ್ತಾರರೊಬ್ಬರು ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದ್ದಾರೆ. ಕ್ಷೇತ್ರ ಹುಡುಕಾಟದಲ್ಲಿ ಸುಸ್ತಾದ ಅಲೆಮಾರಿ ನಾಯಕನನ್ನು ಸಮರ್ಥಿಸಲು ರೈತ ವೃತ್ತಿಯನ್ನು ಹಿಯಾಳಿಸಿದ ಕಾಂಗ್ರೆಸ್ ಮನಸ್ಥಿತಿಗೆ ಧಿಕ್ಕಾರ ಎಂದು ಜೆಡಿಎಸ್ ಕಿಡಿಕಾರಿದೆ.
ಖಾಸಗಿ ಚಾನೆಲ್ ಚರ್ಚೆಯಲ್ಲಿ ಕಾಂಗ್ರೆಸ್ ವಕ್ತಾರರೊಬ್ಬರ ಮಾತಿಗೆ ಜೆಡಿಎಸ್ ಅಕ್ರೋಶ ಹೊರಹಾಕಿದ್ದು, ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ:ಭಾರತಕ್ಕೆ ರೋಹಿತ್ ಬಲ; ಟಾಸ್ ಗೆದ್ದ ಆಸೀಸ್: ಉಭಯ ತಂಡದಲ್ಲೂ ಎರಡು ಬದಲಾವಣೆ
ಪ್ರಜಾಪ್ರಭುತ್ವ ದೇಶವಿದು. ಚುನಾವಣೆಗೆ ಯಾರೂ ನಿಲ್ಲಬಹುದು. ಸೋಲುವ ಭಯದಿಂದ ಕ್ಷೇತ್ರದಿಂದ ಕ್ಷೇತ್ರಕ್ಕೆ ಜಂಪ್ ಆಗುತ್ತಿರುವ ನಿಮ್ಮ ನಾಯಕನನ್ನು ಸಮರ್ಥಿಸಲು, ಒಂದು ವೃತ್ತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಯಿಸಿ. ಅಖಾಡಕ್ಕಿಳಿಯುವ ಮೊದಲೇ ಕಾಂಗ್ರೆಸ್ ಗೆ ಜೆಡಿಎಸ್ ಭಯ ಕಾಡುವುದರಿಂದ ಅವರಿಂದ ಇಂತಹ ಮಾತುಗಳು ಸಹಜ. ಯಾರು ಚುನಾವಣೆಗೆ ಸ್ಪರ್ಧಿಸಬೇಕು, ಸ್ಪರ್ಧಿಸಬಾರದು ಎಂದು ಹೇಳುವ ಅಧಿಕಾರ ಕಾಂಗ್ರೆಸ್ ಗೆ ಕೊಟ್ಟವರಾರು? ಸಾಮಾನ್ಯ ರೈತ ಕುಟುಂಬದ ವ್ಯಕ್ತಿ ಪ್ರಧಾನಿಯಾದ ಈ ದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ನಿಮ್ಮ ಪೌರುಷ ಚುನಾವಣೆಯಲ್ಲಿ ಪ್ರದರ್ಶಿಸಿ, ಮಾತಿನಲ್ಲಲ್ಲ ಎಂದಿದೆ.
ರಾಜ್ಯಕ್ಕೆ ಗ್ಯಾರಂಟಿ ವಿತರಿಸುತ್ತಿರುವ ಕಾಂಗ್ರೆಸ್ ನಾಯಕನಿಗೆ ಸೀಟು ಎಲ್ಲಿ ಎಂದು ಗ್ಯಾರಂಟಿಯಾಗಿಲ್ಲ. ಮೊದಲು ಅದನ್ನು ಖಾತ್ರಿಪಡಿಸಿಕೊಳ್ಳಿ. ಆಮೇಲೆ ಪ್ರತಿಸ್ಪರ್ಧಿಗಳ ವೃತ್ತಿಬಗ್ಗೆ ಮಾತಾಡಿ. ರೈತರ ಬಗೆಗಿನ ಕೀಳು ಮನಸ್ಥಿತಿ ನೀವಿನ್ನೂ ಬದಲಾಯಿಸದಿದ್ದರೆ ಜನ ನಿಮ್ಮನ್ನು ಬದಲಾಯಿಸುತ್ತಾರೆ ಎಚ್ಚರವಿರಲಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.