Advertisement

ಎಪಿಎಂಸಿ ವಿರುದ್ಧ ಸಿಐಡಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ 

07:15 AM Sep 09, 2017 | Team Udayavani |

ಮಡಿಕೇರಿ:  ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ. ಎಪಿಎಂಸಿ ಆಡಳಿತ ಮಂಡಳಿ ವಿರುದ್ಧ ಸೆ. 11ರಂದು ಗೋಣಿಕೊಪ್ಪಲಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪಕ್ಷದ ಜಿಲ್ಲಾ ವಕ್ತಾರರಾದ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಅಧ್ಯಕ್ಷರು ಹಾಗೂ  ಆಡಳಿತ ಪಕ್ಷದ ಸದಸ್ಯರು ಜಿಲ್ಲೆಯ ರೈತರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. 223 ರೂ. ಗಳಿಗೆ ಕಾಳು ಮೆಣಸನ್ನು ಆಮದು ಮಾಡಿಕೊಂಡು ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆ ಮಾಡಲಾಗುತ್ತಿದೆ. ಈ ವ್ಯವಹಾರದಲ್ಲಿ ಕೊಟ್ಯಂತರ ರೂ. ವಂಚನೆಯಾಗಿರುವ ಬಗ್ಗೆ ಸಾಕಷ್ಟು ಸಂಶಯವಿದ್ದು, ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಸಲು ಎಪಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಆಡಳಿತ ಮಂಡಳಿಯ 12 ಮಂದಿ ಸದಸ್ಯರು ರೈತರ ಹಿತ ಕಾಯದೆ ಸ್ವಂತ ಹಿತವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆಮದಾಗುವ ಸಂದರ್ಭ ಒಂದು ಬಾರಿ ಕಾಳು ಮೆಣಸಿಗೆ ಸೆಸ್‌ ಪಾವತಿಯಾಗಿದ್ದರೂ ಮತ್ತೂಮ್ಮೆ ಕಲಬೆರಕೆ ಕಾಳು ಮೆಣಸಿಗೆ ಎಪಿಎಂಸಿ ಸೆಸ್‌ ವಿಧಿಸಿದೆ ಎಂದು ಆರೋಪಿಸಿದರು. ಇದೊಂದು ದೊಡ್ಡ ಹಗರಣವಾಗಿದ್ದು, ನಾಮ ನಿರ್ದೇಶಿತ ಮೂವರು ಸದಸ್ಯರು ಇದನ್ನು ಪತ್ತೆ ಹಚ್ಚಿದ ಅನಂತರ ಕೇಂದ್ರದ ಬಳಿಗೆ ನಿಯೋಗ ತೆರಳುವುದಾಗಿ ಅಧ್ಯಕ್ಷರು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಟಾಟೂ ಮೊಣ್ಣಪ್ಪ ಟೀಕಿಸಿದರು.ಈ ಹಗರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೆ. 11ರಂದು ಎಪಿಎಂಸಿ ಕಚೆೇರಿಗೆ ಮುತ್ತಿಗೆ ಹಾಕಲಾಗುವುದು. ಶ್ರೀಉಮಾಮಹೇಶ್ವರಿ ದೇವಾ ಲಯದ ಬಳಿಯಿಂದ ಎಪಿಎಂಸಿಯವರೆಗೆ ಜಿಲ್ಲೆಯ ರೈತರ ಬೆಂಬಲದೊಂದಿಗೆ ಪ್ರತಿಭಟನ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಿದರು.

ಎಪಿಎಂಸಿಗಳನ್ನು ಸ್ಥಳೀಯ ರೈತರ ಹಿತ ಕಾಯುವುದಕ್ಕಾಗಿ ರಚಿಸಲಾಗಿದೆಯೇ ಹೊರತು ಹೊರ ದೇಶದ ಫ‌ಸಲನ್ನು ಮಾರಾಟ ಮಾಡಲು ಅಲ್ಲವೆಂದು ಸ್ಪಷ್ಟಪಡಿಸಿದರು.

ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಅತೀ ಹೆಚ್ಚು ಕಾಳು ಮೆಣಸನ್ನು ಬೆಳೆಯಲಾಗುತ್ತಿದೆ. ಆದರೆ, ಒಂದು ತಿಂಗಳಿಗೆ 45 ಮೆಟ್ರಿಕ್‌ ಟನ್‌ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದು ದೊಡ್ಡ ದಂಧೆಯಾಗಿದೆಯೆಂದು ಆರೋಪಿಸಿದರು. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳು ಇರುವ ಬಗ್ಗೆ ಸಂಶಯವಿದ್ದು, ಪ್ರಕರಣವನ್ನು ಸಿಐಡಿ ತನಿಖೆ‌ಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. 

Advertisement

ಕಿಸಾನ್‌ ಘಟಕದ ಅಧ್ಯಕ್ಷ ನೆರವಂಡ ಉಮೇಶ್‌ ಮಾತನಾಡಿ, ದಲ್ಲಾಳಿಗಳಿಂದ ರೈತರಿಗೆ ಅನ್ಯಾಯ ವಾಗುವುದನ್ನು ತಡೆಯಲು ಎಪಿಎಂಸಿಗಳನ್ನು ಸ್ಥಾಪಿಸ ಲಾಗಿದೆಯೇ ಹೊರತು, ಸೆಸ್‌ ಸಂಗ್ರಹಿಸಿ ಲಾಭ ಗಳಿಸುವು ದಕ್ಕೆ ಅಲ್ಲವೆಂದರು. ಕಲಬೆರಕೆ ಕಾಳು ಮೆಣಸಿನಿಂದಾಗಿ ಕೊಡಗಿನ ಕಾಳು ಮೆಣಸಿನ ಬೆಲೆ ಕುಸಿಯುವ ಆತಂಕವಿದೆ ಎಂದರು. ವಿಯೆಟ್ನಾಂ ಕಾಳು ಮೆಣಸು ಆಮದಾಗುತ್ತಿರುವ ಬಗ್ಗೆ ಮೊದಲೆ ಕ್ರಮ ಕೈಗೊಂಡು ತಡೆಯಲು ಪ್ರಯತ್ನಿಸದ ಆಡಳಿತ ಮಂಡಳಿ ಮೂವರು ನಾಮ ನಿರ್ದೇಶಿತ ಸದಸ್ಯರು ಪತ್ತೆ ಹಚ್ಚಿದ ಅನಂತರ ಯಾಕೆ ಸ್ಪಷ್ಟೀಕರಣ ನೀಡಿದರೆಂದು ಉಮೇಶ್‌ ಪ್ರಶ್ನಿಸಿದರು.

ಬಾಳೆಲೆಯಲ್ಲಿ ಸಾಲ ಮರುಪಾವತಿಸಲಾಗದ ಕಾರ್ಮಿಕನ ಮೇಲೆ ನಾಯಿಗಳನ್ನು ಛೂ ಬಿಟ್ಟು ಕಚ್ಚಿಸಿದ ಪ್ರಕರಣವನ್ನು ಕಾಂಗ್ರೆಸ್‌ ಪಕ್ಷ ತೀವ್ರವಾಗಿ ಖಂಡಿಸಲಿದೆ.ಸುದ್ದಿಗೋಷ್ಠಿಯಲ್ಲಿ ವೃತ್ತಿಪರ ಘಟಕದ ಅಧ್ಯಕ್ಷರಾದ ಅಂಬೆಕಲ್‌ ನವೀನ್‌ ಕುಶಾಲಪ್ಪ, ಸೇವಾದಳದ ಮಾಜಿ ಅಧ್ಯಕ್ಷರಾದ ಮೋಹನ್‌ ರಾಜ್‌ ಹಾಗೂ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next