ಹೊಸದಿಲ್ಲಿ: ಸಂವಿಧಾನದ ಮೂಲ ತಣ್ತೀಗಳನ್ನು ಯಾವಾಗಲೂ ನಾಶಪಡಿಸಲು ಯತ್ನಿಸಿದ ಕಾಂಗ್ರೆಸ್ ಎಂದಿಗೂ ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯನ್ನು ಸಹಿಸಿಕೊಂಡಿಲ್ಲ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸಂವಿಧಾನಕ್ಕೆ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ ಆರಂಭಿಸಿದ ಅವರು, ಸಂವಿಧಾನ ರೂಪಿಸಲು ಕಾರಣರಾದ ಅನೇಕರನ್ನು ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ನಿರ್ಲಕ್ಷಿಸಿತು ಎಂದು ಆರೋ ಪಿಸಿದರು. ಪಂಡಿತ್ ಮದನ್ ಮೋಹನ್ ಮಾಳವೀಯ, ಭಗತ್ಸಿಂಗ್, ವೀರ ಸಾವರ್ಕರ್ ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಬಹಳಷ್ಟು ಸಂದರ್ಭಗಳಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ ಅಗೌರವ ತೋರಿಸಿದೆ. ಇತ್ತೀಚೆಗೆ ಜೇಬುಗಳಲ್ಲಿ ಸಂವಿ ಧಾನ ಪ್ರತಿ ಇಟ್ಟುಕೊಂಡು ತಿರುಗುತ್ತಿದ್ದಾರೆ. ವಾಸ್ತವದಲ್ಲಿ ಇದನ್ನು ಅವರು ತಮ್ಮ ಹಿರಿಯರಿಂದ ಕಲಿತಿದ್ದಾರೆ. ಅವರು ಕೂಡ ಇಡೀ ಸಂವಿಧಾನವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದರು ಎಂದು ವ್ಯಂಗ್ಯವಾಡಿದರು. ಆದರೆ ಬಿಜೆಪಿ ಸದಾ ಸಂವಿಧಾನಕ್ಕೆ ತಲೆಬಾಗಿಕೊಂಡೇ ಬಂದಿದೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ, ಸ್ವಾಯತ್ತೆ ಜತೆಗೆ ಎಂದೂ ಆಟವಾಡಿಲ್ಲ ಎಂದರು.
ಸಂವಿಧಾನ ನಾಯಕರ ಕೈಲಿದ್ದರೆ ಸಾಲದು. ಅದು ಅವರ ಹೃದಯದಲ್ಲಿರಬೇಕು. ಇದು ಕೇವಲ ವಿಧಿಗಳು, ನಿಯಮಗಳನ್ನು ಹೊಂದಿರುವುದಷ್ಟೇ ಅಲ್ಲ. ಇದು ಪವಿತ್ರ ಪುಸ್ತಕ, ಸಾಮಾನ್ಯ ಜನರ ನಂಬಿಕೆ.
ಶಾಂಭವಿ, ಎಲ್ಜೆಪಿ ಸಂಸದೆ