ಹುಬ್ಬಳ್ಳಿ: ಕಾಂಗ್ರೆಸ್ ಎಂದರೇನೆ ಭ್ರಷ್ಟಾಚಾರ ಪಕ್ಷವಾಗಿದ್ದು, ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮನೆಯ ಮುಂದೆ ಆ ಪಕ್ಷದ ನಾಯಕರು ಅಲೆದಾಡುವುದನ್ನು ನೋಡಿದರೆ ತಿಳಿಯುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಅವರ ಪಕ್ಷದಲ್ಲಿ ಗವರ್ನರ್ ಆದವರೇ ಈ ರೀತಿ ಹೇಳುತ್ತಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ರಕ್ತ ಬೀಜಾಸುರರನ್ನೇ ಹುಟ್ಟಿಸಿದ್ದೆ ಕಾಂಗ್ರೆಸ್. ಪ್ರಿಯಾಂಕ ಖರ್ಗೆ ಬಹಳ ಮಾತನಾಡಿದರೆ ರಾಷ್ಟ್ರೀಯ ನಾಯಕ ಆಗಬಹುದು ಎಂದು ತಿಳಿದುಕೊಂಡಿಸದ್ದಾರೆ. ಕಾಂಗ್ರೆಸ್ ಭೂತ ಕಾಲದ ಪಕ್ಷವಾಗಿದೆ ಎಂದರು.
ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುವುದು ರೂಢಿಯಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಅವರ ಕಾಲದಲ್ಲಿ ಭ್ರಷ್ಟಾಚಾರ ಆರಂಭವಾಗಿದೆ. ಮಾಜಿ ಪ್ರಧಾನಿ ನೆಹರೂ ಅವರನ್ನು ಹಿಡಿದುಕೊಂಡು ಇಂದಿನ ವರೆಗೆ ಹಗರಣಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಿಡಿದು ಪ್ರಿಯಾಂಕ ಖರ್ಗೆ ವರೆಗೆ ಭ್ರಷ್ಟಾಚಾರಮಯ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಘನತೆ, ಗೌರವದೊಂದಿಗೆ ಮಾತನಾಡಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇವರೊಂದಿಗೆ ಬಹಳ ಕೀಳಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಗುಲಾಮಿತನವಿದೆ. ರಾಹುಲ್ ಮತ್ತು ಸೋನಿಯಾ ಗಾಂಧಿ ಚುನಾಯಿತ ಪ್ರತಿನಿಧಿಗಳು ಅಲ್ಲ. ಪ್ರಿಯಾಂಕ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಸಹ ಗಾಂಧಿ ಪರಿವಾರದ ಆಶೀರ್ವಾದದಿಂದ ಬಂದಿದ್ದಾರೆ. ನಮ್ಮದೇನು ನಡಿಯುವುದಿಲ್ಲವೆಂದು ಅಲ್ಲಿಯ ನಾಯಕರು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಎಂದರು.