Advertisement

ಸುಳ್ಳು ಪ್ರಚಾರ ಸೃಷ್ಟಿಸಲು ಹೋಗಿ ಕಾಂಗ್ರೆಸ್ಸೇ ಬೆತ್ತಲಾಗಿದೆ: ಸಿ. ಸಿ.ಪಾಟೀಲ್

02:56 PM Aug 11, 2022 | Team Udayavani |

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಬದಲಾಗುತ್ತಾರೆ ಎಂಬ ಸುಳ್ಳು ಪ್ರಚಾರ ಸೃಷ್ಟಿಸಲು ಹೋಗಿ ಕಾಂಗ್ರೆಸ್ಸೇ ಬೆತ್ತಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹೇಳಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವೀಟ್ ಗೆ ಬೆಲೆಯೇ ಇಲ್ಲ ಎಂಬುದು ಕಾಂಗ್ರೆಸ್ಸಿನ ಪರಸ್ಪರ ವಿರುದ್ಧ ದಿಕ್ಕಿನ ಇಬ್ಬರು ಮುಖಂಡರ ಹೇಳಿಕೆಗಳಿಂದ ಸಾಬೀತಾಗಿದೆ. ಮೂರನೇ ಮುಖ್ಯಮಂತ್ರಿಯಾಗಿ ಹೊಸಬರು ಬರುತ್ತಾರೆಂದು ನಾನಂತೂ ಹೇಳಿಲ್ಲ, ಈ ವಿಚಾರ ನನಗಂತೂ ಗೊತ್ತಿಲ್ಲ, ಈ ಬಗ್ಗೆ ಟ್ವೀಟ್ ಮಾಡಿದವರನ್ನೇ ಕೇಳಿ ಎಂದು ಒಬ್ಬ ಕಾಂಗ್ರೆಸ್ ಮುಖಂಡರು ಹೇಳಿದ ಮರುಕ್ಷಣವೇ ಇದಕ್ಕೆ ತದ್ವಿರುದ್ಧವಾಗಿ ಇನ್ನೊಬ್ಬರು ಹೇಳಿಕೆ ಕೊಟ್ಟು ಬೊಮ್ಮಾಯಿ ಅವರನ್ನು ಬದಲಿಸುತ್ತಾರೆ ಎಂಬ ಸುದ್ದಿ ಬಿಜೆಪಿ ಮುಖಂಡರಿಂದಲೇ ತಮಗೆ ಗೊತ್ತಾಗಿದೆ ಎಂದು ರಾಗ ಬದಲಾಯಿಸಿದ್ದಾರೆ.ಈ ಇಬ್ಬರು ನಾಯಕರ ಪರಸ್ಪರ ತದ್ವಿರುದ್ಧದ ಹೇಳಿಕೆಗಳನ್ನು ನೋಡುವಾಗ ನನಗೊಂದು ಗಾದೆ ನೆನಪಾಗುತ್ತಿದೆ. ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತೆ ಇಬ್ಬರೂ ಮುಖಂಡರ ಹೇಳಿಕೆಗಳಲ್ಲಿ ಪರಸ್ಪರ ವಿರೋಧಾಭಾಸಗಳಿವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ಸಿನ ಅಧಿಕೃತ ಹೇಳಿಕೆ ಕೂಡ ಹೇಗೆ ತನ್ನ ಪಾವಿತ್ರ್ಯ ಕಳೆದುಕೊಂಡಿದೆ.. ಕಾಂಗ್ರೆಸ್ ಮುಖಂಡರು ನಮ್ಮ ಬಿಜೆಪಿ ಸರ್ಕಾರದ ಸಾಧನೆ, ಜನಪ್ರಿಯತೆ ಕಂಡು ಹೇಗೆ ಹತಾಶಗೊಂಡಿದ್ದಾರೆ ಎಂಬುದಕ್ಕೆ ಇನ್ನೇನು ಉದಾಹರಣೆ ಬೇಕು?ಎಂದು ಪ್ರಶ್ನಿಸಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಅದು ಮುಗಿದ ಅಧ್ಯಾಯ. ಇನ್ನು ಮುಂದೆ ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತಬಾರದು ಎಂದು ಯಡಿಯೂರಪ್ಪನವರು ಮತ್ತು ನಳಿನ್ ಕುಮಾರ್ ಕಟೀಲ್ ಅವರೇ ಹೇಳಿದ್ದಾರೆ. ಅಷ್ಟೇಅಲ್ಲ ಬಹುತೇಕ ನಾವು ಎಲ್ಲಾ ಮುಖಂಡರು ಮತ್ತು ಮಂತ್ರಿಗಳು ಕೂಡ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯ ಎದುರಿಸುತ್ತೇವೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ವಾಸ್ತವ ಹೀಗಿರುವಾಗ ಸುಳ್ಳುಸುದ್ದಿ, ವದಂತಿಗಳನ್ನು ಹಬ್ಬಿಸಿ ತನ್ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯಲು ಕಾಂಗ್ರೆಸ್ ಪ್ರಯತ್ನಿಸುವುದು ವಿಷಾದನೀಯ. ಇಂತಹ ಗಿಮಿಕ್ ಗಳಿಂದ ಮುಂದೆ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದ್ದರೆ ಅದಕ್ಕೆ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next