Advertisement

ರಾಜ್ಯ ಸರ್ಕಾರದ ವಿರುದ್ಧ ಮತದಾರರ ಮಾಹಿತಿ ಕಳುವು ಆರೋಪ‌ ಮಾಡಿದ ಕಾಂಗ್ರೆಸ್

11:08 AM Nov 17, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತದಾರರ ಮಾಹಿತಿ ಕಳ್ಳತ‌ನದ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ರಾಜೀನಾಮೆಗೆ ಆಗ್ರಹಿಸಿದೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ‌ ಡಿಸಿಎಂ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಈ ಆರೋಪ ಮಾಡಿದ್ದು, ಅಶ್ವತ್ಥನಾರಾಯಣ ಒಡೆತನದ ಹೊಂಬಾಳೆ ಕಂಪನಿ ಮೂಲಕ ಈ ದ್ರೋಹ ಮಾಡಲಾಗುತ್ತಿದೆ. ಅವರು ಈ ಹಗರಣದ ಪಿತಾಮಹ ಎಂದು ಅಶ್ವತ್ಥನಾರಾಯಣ ವಿರುದ್ಧ ಶಿವಕುಮಾರ್ ಹರಿಹಾಯ್ದಿದ್ದಾರೆ.

ಮತದಾರರ ಡಾಟಾ ಸಂಗ್ರಹ ಮಾಡಲಾಗುತ್ತಿದೆ. ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿಯವರೇ ಕಾರಣ. ಸಿಎಂ ಬೊಮ್ಮಾಯಿಯವರೇ ಇದರ ಹೊಣೆ ಹೊರಬೇಕು. ಬಿಬಿಎಂಪಿ ಅಧಿಕಾರಿಗಳಿಗೆ ಡಾಟಾ ಸಂಗ್ರಹಕ್ಕೆ ಅವಕಾಶ ನೀಡಿದೆ. ಚಿಲುಮೆ ಎಜುಕೇಶನ್ ಇನ್ಸಿಟಿಟ್ಯೂಟ್ ಸಂಸ್ಥೆಯಿಂದ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮಹದೇವಪುರ ಕ್ಷೇತ್ರದಲ್ಲಿ ಮೊದಲು‌ ಈ ರೀತಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಆ ಬಳಿಕ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಿದ್ದಾರೆ. ಇವಿಎಂ ಪ್ರಿಪರೇಷನ್ ಮಾಡಲು ಹೊರಟಿದ್ದಾರೆ. ಇವಿಎಂ ಸಿದ್ದತೆಯನ್ನು ಚುನಾವಣಾ ಆಯೋಗ ಮಾಡಬೇಕು. ಆದರೆ ಇಲ್ಲಿ ರಾಜಕೀಯ ಪಕ್ಷ ಮಾಡುತ್ತಿದೆ. ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಸುರ್ಜೇವಾಲಾ ಪ್ರಶ್ನಿಸಿದರು.

ಇದನ್ನೂ ಓದಿ:ಇರುವುದು ಬರೀ 7.5 ಕೋ.ರೂ.: ಬೇಕಿದೆ ಹಲವು ಆಟಗಾರರು; ಕೋಲ್ಕತ ನೈಟ್‌ ರೈಡರ್ಸ್‌ ಗೆ ಸಂಕಷ್ಟ

Advertisement

ಮತದಾರರ ಮೊಬೈಲ್ ನಂಬರ್, ಅವರ ಅಡ್ರೆಸ್, ಅವರ ವೈಯುಕ್ತಿಕ ಮಾಹಿತಿ ಎಲ್ಲವನ್ನೂ ಸಂಗ್ರಹಿಸಲಾಗಿದೆ. ಫೇಕ್ ಐಡೆಂಟಿಟಿ ಕಾರ್ಡ್ ಇಟ್ಟುಕೊಂಡು ಸಂಗ್ರಹಿಸಿದ್ದಾರೆ. ಇದರ ಕಿಂಗ್ ಪಿನ್ ಗಳು ಕೃಷ್ಣಪ್ಪ, ರವಿಕುಮಾರ್. ಇವರು ಮಾಜಿ ಡಿಸಿಎಂ, ಹಾಲಿ ಸಚಿವರ ಆಪ್ತರು. ಮಲ್ಲೇಶ್ವರಂನ ಶಾಸಕರ ಜೊತೆ ಗುರುತಿಸಿ ಕೊಂಡಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಅವರ ಜೊತೆ ಕಿಂಗ್ ಪಿನ್ ಇದ್ದಾರೆ ಎಂದು ಆರೋಪಿಸಿದರು.

ಈ ಹಗರಣಕ್ಕೆ ಅವಕಾಶ ನೀಡಿದ ಸಿಎಂ ಬೊಮ್ಮಾಯಿ ಮೊದಲು ರಾಜೀನಾಮೆ‌ ನೀಡಬೇಕು. ಕೂಡಲೇ ಬೊಮ್ಮಾಯಿಯವರನ್ನು ಬಂಧಿಸಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next