ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ಮತ್ತು ಕಾಂಗ್ರೆಸ್ ಸಚಿವ, ಶಾಸಕರ ಭ್ರಷ್ಟಾಚಾರದ ದಾಖಲೆಗಳನ್ನು ಸೆ.23ರಂದು ಬಿಡುಗಡೆ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.
ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯರು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆಗೆ ಶುಕ್ರವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಮಾಡಿರುವ ಎಲ್ಲಾ ಹಗರಣದ ಮಾಹಿತಿ ನಮ್ಮ ಬಳಿ ಇದೆ, ದಾಖಲೆ ಸಮೇತವಾಗಿ ಬಹಿರಂಗಪಡಿಸಲಿದ್ದೇವೆ ಎಂದು ಗುಡುಗಿದರು.
ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗಲು ದರೋಡೆ ಮಾಡಿರುವುದಕ್ಕೆ ಅಧಿಕೃತ ದಾಖಲೆ ಇದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ತನಿಖೆ ನಡೆಸಬೇಕಾದ ಸಂಸ್ಥೆಗಳನ್ನೇ ಮುಚ್ಚಿಹಾಕಿದ್ದಾರೆ. ಇನ್ನು ಕೆಲವು ತನಿಖಾ ಸಂಸ್ಥೆಗಳನ್ನು ಮುಖ್ಯಮಂತ್ರಿಯವರು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಸಚಿವ, ಶಾಸಕರ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆ ಇಟ್ಟುಕೊಂಡೇ ಹೇಳಿಕೆ ನೀಡುತ್ತಿದ್ದೇನೆ. ಯಾವುದಕ್ಕೂ ತಲೆಕಡೆಸಿಕೊಳ್ಳುವುದಿಲ್ಲ. ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುವುದೇ ನಮ್ಮ ಗುರಿ. ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಕೆಲವು ದಾಖಲೆಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿ ಸಾರ್ವಜನಿಕರ ಮುಂದಿಡಲಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟ ಸದಸ್ಯರು ನಡೆಸಿರುವ ಭ್ರಷ್ಟಾಚಾರವನ್ನು ಅಧಿಕಾರಿಗಳ ನೆರವಿನಿಂದ ಮುಚ್ಚಿಹಾಕುತ್ತಿದ್ದಾರೆ. ರಾತ್ರೋರಾತ್ರಿ ಕಡತ ನಾಪತ್ತೆ ಮಾಡಿಸುತ್ತಿದ್ದಾರೆ. ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಮುಖ ಕಡತಗಳ ನಾಪತ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ದೂರಿದರು.