ಯಾದಗಿರಿ: ರಾಜ್ಯದಲ್ಲಿ ಬಿತ್ತನೆ ಬೀಜ ಬೆಲೆ ಏರಿಕೆಯಾಗಿದೆ, ಸರ್ಕಾರ ಕೂಡಲೇ ಬಿತ್ತನೆ ಬೀಜದ ದರ ಕಡಿಮೆ ಮಾಡಬೇಕು. ಈ ರೀತಿ ಬೆಲೆ ಹೆಚ್ಚು ಮಾಡುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬದುಕಿನ ಮೇಲೆ ಸರ್ಕಾರ ಪ್ರಹಾರ ಮಾಡುತ್ತಿದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಎಲ್ಲವನ್ನೂ ಹೆಚ್ಚಳ ಮಾಡಿ ಇದೀಗ ರೈತರ ಬಿತ್ತನೆ ಬೀಜದ ಮೇಲೆ ಕಣ್ಣು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿ ಎಲ್ ಸಂತೋಷ್ ಬಂಧನಕ್ಕೆ ತೆಲಂಗಾಣ ಮಾಜಿ ಸಿಎಂ ಸಂಚು ರೂಪಿಸಿ, ಏನಾದರೂ ಮಾಡಿ ಬಿಜೆಪಿಯನ್ನು ಸಿಲುಕಿಸಬೇಕೆಂದು ಸಂಚು ರೂಪಿಸಿದ್ದರು ಆದರೆ ಅಂತಿಮವಾಗಿ ಸತ್ಯಕ್ಕೆ ಜಯವಾಗಿದೆ. ಕೆಸಿಆರ್ ಈ ರೀತಿ ಸಿಲುಕಿಸಲು ಹೋಗಿ ತಾವೆ ಸಿಕ್ಕಾಕಿಕೊಂಡು ಅಧಿಕಾರ ಕಳೆದುಕೊಂಡು ಮಗಳು ಜೈಲು ಸೇರಿರುವಂತಹ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕೊಲೆಗಳ ಮೇಲೆ ಕೊಲೆಗಳಾಗುತ್ತಿವೆ, ನೇಹಾ ಪ್ರಕರಣ ಮಾಸುವ ಮುನ್ನವೇ ಅಂಜಲಿ ಎಂಬ ಯುವತಿಯ ಹತ್ಯೆಯಾಗಿದೆ. ಕೊಲೆಗಡುಕರ, ಅತ್ಯಾಚಾರಿಗಳ ರಕ್ಷಣೆಗೆ ಮುಂದಾದ ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಜಿಲ್ಲಾ ವಕ್ತಾರ ಹೆಚ್.ಸಿ. ಪಾಟೀಲ್, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಇದ್ದರು.