Advertisement

Congress Government: ಸಚಿವ ಬೋಸರಾಜ ಪತ್ನಿ ವಿರುದ್ಧ ಅರಣ್ಯ ಭೂಕಬಳಿಕೆಯ ಆರೋಪ

03:12 AM Oct 22, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟದ ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲ ರಿಗೆ ದೂರು ಸಲ್ಲಿಕೆಯಾಗಿದ್ದು, ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಪತ್ನಿ ಕೃಷ್ಣವೇಣಿ ಹೆಸರಿನಲ್ಲಿ ರಾಯಚೂರು ಬಳಿ 5 ಎಕರೆ ಮೀಸಲು ಅರಣ್ಯ ಭೂಮಿ ಕಬಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಆರೋಪಿಸಿದ್ದಾರೆ.

Advertisement

ಈ ಕುರಿತು ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರಿಗೆ 4 ಪುಟಗಳ ದೂರು ಕಳುಹಿಸಿಕೊಟ್ಟಿದ್ದು, ಅದ ರೊಂದಿಗೆ ಸಂಬಂಧಿಸಿದ ದಾಖಲೆಗಳನ್ನೂ ಲಗತ್ತಿಸಿದ್ದಾರೆ. ಅಲ್ಲದೆ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡುವಂತೆಯೂ ರಾಜ್ಯಪಾಲರಿಗೆ ಕೋರಿದ್ದಾರೆ.

ತೇಜೋವಧೆ ಹುನ್ನಾರ
ತಮ್ಮ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರು ಕುರಿತು ಪ್ರತಿಕ್ರಿಯಿಸಿದ ಅವರು, ಇದು ನನ್ನ ತೇಜೋವಧೆಯ ಹುನ್ನಾರ. ನಾನು ಅಥವಾ ನನ್ನ ಕುಟುಂಬ ಅರಣ್ಯ ಒತ್ತುವರಿ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. 1987ರಲ್ಲಿ ನಾನು ಯಾವುದೇ ಹುದ್ದೆಯಲ್ಲೂ ಇರಲಿಲ್ಲ. ಕೃಷಿಗಾಗಿ ಅಂದಿನ ಕಾಲದಲ್ಲಿ ನನ್ನ ಕುಟುಂಬದಿಂದ ಭೂಮಿಯನ್ನು ಖರೀದಿಸಲಾಗಿತ್ತು.

ಭೂಮಿ ಖರೀದಿಯ ಸಂದರ್ಭದಲ್ಲಿ ಕಂದಾಯ ದಾಖಲೆಗಳು, ಕ್ರಯಪತ್ರಗಳು ಹಾಗೂ ಇನ್ನಿತರ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಲಾಗಿತ್ತು. ಪರಿಶೀಲನೆಯ ಅನಂತರ ಮೂಲ ಜಮೀನಿನ ಮಾಲಕರಿಂದ ಭೂಮಿಯನ್ನು ಖರೀದಿಸಲಾಗಿತ್ತು. ನಾನು ಇದೇ ಮೊದಲ ಬಾರಿಗೆ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೊದಲ ಬಾರಿ ಶಾಸಕನಾಗಿದ್ದೂ ಕೂಡ 1999 ರಲ್ಲಿ. 1987ರಲ್ಲಿ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.

“ಯಾವುದೇ ತಪ್ಪಿಲ್ಲದೇ ಇದ್ದರೂ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ತೇಜೋವಧೆ ಮಾಡುವ ಪ್ರಯತ್ನ ಇದು ಎನ್ನುವುದು ಸ್ಪಷ್ಟ. ಇತ್ತೀಚೆಗೆ ಸಚಿವರ ಮೇಲೆ ರಾಜ್ಯಪಾಲರಿಗೆ ದೂರು ನೀಡುವುದು ಒಂದು ಹವ್ಯಾಸವಾಗಿ ಬಿಟ್ಟಿದೆ.” -ಎನ್‌.ಎಸ್‌. ಬೋಸರಾಜು, ಸಣ್ಣ ನೀರಾವರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next