Advertisement

ನಾಡಿದ್ದಿನಿಂದ ಕಾಂಗ್ರೆಸ್‌ ಗ್ಯಾರಂಟಿ ಪ್ರಕ್ರಿಯೆ: ಜೂ. 1ರಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

01:25 AM May 30, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಬಹುತೇಕ ಜೂ. 1ರಂದು ಮಾರ್ಗಸೂಚಿ ಹೊರಬೀಳುವ ನಿರೀಕ್ಷೆಯಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಕ್ತಿಭವನದಲ್ಲಿ ಗ್ಯಾರಂಟಿ ಅನುಷ್ಠಾನ ಸಂಬಂಧ ಹಣಕಾಸು ಮತ್ತಿತರ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ಎರಡು ದಿನಗಳಲ್ಲಿ ಮಾರ್ಗಸೂಚಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

ಐದು ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಸಂಪನ್ಮೂಲ ಕ್ರೋಡೀಕರಣದ ಜತೆಗೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಇಲಾಖಾವಾರು ಅನುದಾನದಲ್ಲಿ ಹೆಚ್ಚು ಕಡಿತ ಮಾಡಿದರೆ ಸಚಿವರಿಂದ ವಿರೋಧ ವ್ಯಕ್ತವಾಗಬಹುದು. ಎಷ್ಟೇ ಕಡಿತ ಮಾಡಿದರೂ ಸುಮಾರು 15 ಸಾವಿರ ಕೋಟಿ ರೂ. ಮಾತ್ರ ಲಭ್ಯವಾಗಬಹುದು. ಉಳಿದಂತೆ 35 ಸಾವಿರ ಕೋಟಿ ರೂ. ಹೊಂದಿಸಲೇಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಮತ್ತೆ ಸಭೆ
ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಬುಧವಾರ ಸಿಎಂ ಸಿದ್ದರಾಮಯ್ಯ ಮತ್ತೂಮ್ಮೆ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದು, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು.

Advertisement

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಂದಾಯ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ, ಯುವಜನ ಸೇವೆ ಇಲಾಖೆಗಳ ನೆರವು ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ನಡೆದ ಚರ್ಚೆಯೇನು?
ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳಿದ್ದು, ಆ ಪೈಕಿ ಸುಮಾರು 1.70 ಕೋಟಿ ಕುಟುಂಬಗಳು ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಹೊಂದಿವೆ. ಯಾರು ಫ‌ಲಾನುಭವಿಗಳಾಗಲು ಅರ್ಹರು ಎಂಬ ಮಾನದಂಡ ನಿಗದಿ ಮಾಡಿದರೆ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟರು ಎನ್ನಲಾಗಿದೆ.

200 ಯೂನಿಟ್‌ ಒಳಗೆ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್‌ ಯೋಜನೆ ಜಾರಿ ಮಾಡಬೇಕೇ ಅಥವಾ 200 ಯೂನಿಟ್‌ವರೆಗೆ ಉಚಿತ ನೀಡಿ ಅನಂತರ ಬಳಸುವ ವಿದ್ಯುತ್‌ಗೆ ಶುಲ್ಕ ವಿಧಿಸಬೇಕೇ ಎಂಬ ಬಗ್ಗೆ ಚರ್ಚೆಯಾಗಿದೆ.

ಬಡ ಹಾಗೂ ಮಧ್ಯಮ ವರ್ಗಕ್ಕೆ ಉಚಿತ ವಿದ್ಯುತ್‌ ಕೊಡಬೇಕಾಗುತ್ತದೆ. ಇತರ ಕುಟುಂಬ ಗಳಿಗೆ ಮಾನದಂಡ ನಿಗದಿ ಸೂಕ್ತ. ಅದೇ ರೀತಿ ಮಹಿಳೆಯರಿಗೆ ಉಚಿತ ಬಸ್‌ ಸಂಚಾರ ವಿಚಾರದಲ್ಲೂ ಮಾನದಂಡ ನಿಗದಿ ಮಾಡ ಬೇಕು. ಶೇ. 45ರಷ್ಟು ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ಪ್ರತ್ಯೇಕ ಬಸ್‌ ಪಾಸ್‌ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಉಚಿತ ಸಂಚಾರ: ಇಂದು ಸಭೆ
ಮಹಿಳೆಯರಿಗೆ ಉಚಿತ ಬಸ್‌ ಸಂಚಾರ ಯೋಜನೆ ಜಾರಿ ಸಂಬಂಧ ಮಂಗಳವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇದೇ ರೀತಿ ಆಯಾ ಇಲಾಖೆಗಳ ಸಚಿವರು ಸಭೆ ನಡೆಸಿ ಮಾಹಿತಿ ಸಂಗ್ರಹಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಕೊಟ್ಟೇ ಕೊಡುತ್ತೇವೆ. ನಾವು ಭರವಸೆ ನೀಡಿದ್ದೇವೆ, ಈಡೇರಿಸುತ್ತೇವೆ. ವಿಪಕ್ಷಗಳು ತಾಳ್ಮೆಯಿಂದ ಇರಬೇಕು ಎಂದು ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರಾಮ ಲಿಂಗಾರೆಡ್ಡಿ ಹೇಳಿದ್ದಾರೆ.

ಸಿಎಂ ಬಳಿ ಉಳಿದ ಐಟಿ-ಬಿಟಿ, ಮೂಲ ಸೌಕರ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಿದ್ದು, ರವಿವಾರ ಮಧ್ಯರಾತ್ರಿ ಗೆಜೆಟ್‌ ಅಧಿಸೂಚನೆ ಹೊರಬಿದ್ದಿದೆ.

ಸಿಎಂ ಸೇರಿ 34 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಶನಿವಾರ ಹೊರಬಿದ್ದಿದ್ದ ಖಾತೆಗಳ ಹಂಚಿಕೆಯ ಪಟ್ಟಿಯಲ್ಲಿ 2ರಿಂದ 3 ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿದರೆ ಯಥಾಸ್ಥಿತಿ ಇದೆ. ಸಿಎಂ ಹಣಕಾಸು ಜತೆಗೆ ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ರಾಮಲಿಂಗಾ ರೆಡ್ಡಿ ಅವರಿಗೆ ಸಾರಿಗೆ ಜತೆಗೆ ಮುಜರಾಯಿ ಖಾತೆ, ಡಾ| ಶರಣ ಪ್ರಕಾಶ್‌ ಪಾಟೀಲ್‌ ಅವರಿಗೆ ವೈದ್ಯಕೀಯ ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿ ಖಾತೆ, ಶಿವರಾಜ್‌ ತಂಗಡಗಿ ಅವರಿಗೆ ಹಿಂದುಳಿದ ವರ್ಗದ ಇಲಾಖೆ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ನಾಗೇಂದ್ರ ಅವರಿಗೆ ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಖಾತೆ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next