Advertisement

ಕಾಂಗ್ರೆಸ್‌ ಮುಕ್ತ ಭಾರತ ಅಸಾಧ್ಯ

11:17 AM Apr 30, 2018 | Team Udayavani |

ಮೂಡಿಗೆರೆ: ಸಾವಿರ ಮೋದಿ ಮತ್ತು ಅಮಿತ್‌ ಶಾಗಳು ಬಂದರೂ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ ಹೇಳಿದರು. ಭಾನುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ, ಸಾಮಾಜಿಕ ನ್ಯಾಯ ಉಳಿಯಬೇಕಾದರೆ, ಅಂಬೇಡ್ಕರ್‌ ಸಂವಿಧಾನ ಉಳಿಯಬೇಕಾದರೆ ನಾವು ತೀರ್ಮಾನ ಮಾಡಬೇಕು, ಮೋದಿ, ಅಮಿತ್‌ ಶಾ ಮುಕ್ತ ಮಾಡಬೇಕು ಎಂದರು.

Advertisement

ದೇಶದಲ್ಲಿರುವ ಕಪ್ಪು ಹಣವನ್ನು ತಂದು ಭಾರತೀಯರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಆದರೆ 15 ಪೈಸೆ ಕೂಡ ಹಾಕಿಲ್ಲ. ಸುಳ್ಳು ಹೇಳುವುದಕ್ಕೆ ಸಂಬಂಧಿಸಿದಂತೆ ಗ್ಲೋಬಲ್‌ ಪ್ರಶಸ್ತಿ ಕೊಡಬೇಕೆಂದಾದರೆ ಅದು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಚುನಾವಣೆಯೇ ನಡೆದಿಲ್ಲ, ಸಿಎಂ ಆಗಲು ಹೊರಟಿದ್ದಾರೆ. ಹಿಂದೊಮ್ಮೆ ನಿಮ್ಮನ್ನು ಬಿಜೆಪಿಯಿಂದ ಹೊರಗೆ ಹಾಕಿದ್ದು ಯಾಕೆ? ನಿಮ್ಮ ಭ್ರಷ್ಟಾಚಾರ ಮಿತಿ ಮೀರಿದೆ. ಅದನ್ನು ನಿಮ್ಮ ಪಕ್ಷದ ನಾಯಕರೆ ಹೇಳಿಕೊಂಡಿದ್ದಾರೆ. ಕೆಜೆಪಿ ಕಟ್ಟಿದಾಗ ಶೋಭಾ ಕರಂದ್ಲಾಜೆ ಅವರು ಬಿಜೆಪಿಯನ್ನೇ ಮುಗಿಸುವುದೇ ನಮ್ಮ ಕೆಲಸ
ಎಂದಿದ್ದರು. ನಿಮ್ಮ ಮಾತಿನ ಮೇಲೆ ನಿಮಗೆ ಬದ್ಧತೆಯಿದೆಯೇ ಎಂದು ಪ್ರಶ್ನಿಸಿದರು. 

ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಾಂಗ್ರೆಸನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ 30 ಮಂದಿ ಕೇಂದ್ರ ಸಚಿವರು ರಾಜ್ಯಕ್ಕೆ ಪ್ರಚಾರಕ್ಕೆ ಬಂದಿದ್ದಾರೆ. ಅವರ ತಂತ್ರ ಫಲಿಸದು. ಕಾಂಗ್ರೆಸ್‌ ಗೆಲುವು ನಿಶ್ಚಿತ. ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯದ ನೇತೃತ್ವದ ಸರಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆ ಬಾಗಿಲಿಗೆ ಪ್ರಧಾನಮಂತ್ರಿ ಸ್ಥಾನ ಹುಡುಕಿಕೊಂಡು ಬಂದಿದ್ದರೂ ಅದನ್ನು ತಿರಸ್ಕರಿಸಿ ಪಕ್ಷ ಮುನ್ನಡೆಸಲು ಮುಂದಾದರು.

ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಕನಸನ್ನು ಬಿಜೆಪಿ ಹೊಂದಿದೆ. ಬಿಜೆಪಿ ಬದುಕಿರುವುದೇ ಹೆಚ್ಚು. ಈ ಚುನಾವಣೆಯಲ್ಲಿ ಬಿಜೆಪಿಯ ಪಥನ ಕರ್ನಾಟಕದಿಂದ ಪ್ರಾರಂಭವಾಗಲಿದೆ ಎಂದು ಭವಿಷ್ಯ ನುಡಿದರು.

Advertisement

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನೂರಾರು ಕಾರ್ಯಕರ್ತರು ಸಚಿವ ಡಿ.ಕೆ.ಶಿವಕುಮಾರ್‌ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಪ್ರಾರಂಭದಲ್ಲಿ ಹೊಯ್ಸಳ ಕ್ರೀಡಾಂಗಣದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಬೈಕ್‌ ರ್ಯಾಲಿ ಮೂಲಕ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ವೇದಿಕೆಗೆ ಕರೆ ತರಲಾಯಿತು.

ಕಾಂಗ್ರೆಸ್‌ ಅಭ್ಯರ್ಥಿ ಮೋಟಮ್ಮ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿ.ಪಂ. ಸದಸ್ಯ ಪ್ರಭಾಕರ್‌, ಪ.ಪಂ.ಅಧ್ಯಕ್ಷೆ ರಮೀಬಾಭಿ, ಮಾಜಿ ಡಿಸಿಸಿ ಅಧ್ಯಕ್ಷ ಎಂ.ಎಲ್‌.ಮೂರ್ತಿ, ಸಿಪಿಐ ಮುಖಂಡರಾದ ರವಿಕುಮಾರ್‌, ಎಂ.ಎಸ್‌. ಹರೀಶ್‌, ಕೆಪಿಸಿಸಿ ವೀಕ್ಷಕ ಪಟೇಲ್‌ ಶಿವಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೇಮಶೇಖರ್‌, ಮುಖಂಡರಾದ ಸವಿತಾ ರಮೇಶ್‌, ಬಿ.ಎಸ್‌.ಜಯರಾಂ, ವಿನಯ್‌ ಕುಮಾರ್‌, ಎನ್‌. ಆರ್‌.ನಾಗರತ್ನ, ನಯನ ಮೋಟಮ್ಮ, ಸಿ.ಕೆ. ಇಬ್ರಾಹಿಂ, ಎಂ.ಸಿ.ಹೂವಪ್ಪ, ಕಮಲಾಕ್ಷಿ, ಟಿ.ಎ.ಮದೀಶ್‌, ಡಿ.ಎಸ್‌.ರಘು, ಶ್ರೀನಿವಾಸ್‌ ಹೆಬ್ಟಾರ್‌, ಕೃಷ್ಣೇಗೌಡ, ಎಂ.ಎಸ್‌.ಅನಂತ್‌ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂರಾರು ಶಾಸಕರನ್ನು ತಯಾರು ಮಾಡಬಹುದು. ಆದರೆ ಮತ್ತೂಬ್ಬ ಮೋಟಮ್ಮ ಅವರನ್ನು ತಯಾರು ಮಾಡಲು ಸಾಧ್ಯವಿಲ್ಲ. ಸ್ತ್ರೀಶಕ್ತಿ ಮೂಲಕ ಹೆಣ್ಣು ಕುಟುಂಬದ ಕಣ್ಣು, ಸಮಾಜದ ಶಕ್ತಿ ಎಂದು ತೋರಿಸಿಕೊಟ್ಟವರು ಮೋಟಮ್ಮ. ನಿಂಗಯ್ಯ ಸದನದಲ್ಲಿ ಬಾಯಿ ತೆರೆದಿದ್ದೇ ನೋಡಿಲ್ಲ. ಅವರ ಬಾಯಿ ಸ್ವಿಚ್‌ ಆಫ್‌ ಆಗಿದೆ. ಚುನಾವಣೆಯಲ್ಲಿ ಮೋಟಮ್ಮ ಗೆದ್ದರೆ ವಿಧಾನ ಸಭೆಯ 3ನೇ ಮಹಡಿಗೆ ಪ್ರವೇಶಿಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next