ಮಂಗಳೂರು: ಕಾಂಗ್ರೆಸ್‌ನವರಿಗೆ ತಮ್ಮ ನಕಲಿ ಮತದಾರರ ಹೆಸರು ಡಿಲೀಟ್ ಆಗುತ್ತದೆ ಎನ್ನುವ ಭಯದಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪದ ಬಗ್ಗೆ ಮಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತಿವರ್ಷ ಸೇರಿದಂತೆ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಇದು ಚುನಾವಣಾ ಆಯೋಗದ ನಿರಂತರ ಪ್ರಕ್ರಿಯೆ. 18 ವರ್ಷ ಆದವರು ಹೊಸದಾಗಿ ಸೇರ್ಪಡೆಯಾಗುತ್ತಾರೆ. ಊರು ಬಿಟ್ಟು ಹೋಗುವವರು, ಮನೆ ಖಾಲಿ ಮಾಡಿ ಹೋಗುವವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಇವೆಲ್ಲವನ್ನು ಪರಿಷ್ಕರಣೆ ಮಾಡಬೇಕು. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.
ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಈ ವಿಚಾರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. ದೂರು ನೀಡಿದ ಒಂದೇ ದಿನದಲ್ಲಿ ಆರೋಪಿಗಳ ಬಂಧವವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.