Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಲ್ಲ, ಸಿದ್ದರಾಮಯ್ಯ ಸೋಲು

02:10 PM May 16, 2018 | Team Udayavani |

ಮೈಸೂರು: ರಾಜಕೀಯವಾಗಿ ಬೆಳೆಸಿದವರನ್ನು ತಿರಸ್ಕಾರದಿಂದ ನೋಡಿದ್ದು ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಲ್ಲ, ಸಿದ್ದರಾಮಯ್ಯ ಸೋಲು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಟೀಕಿಸಿದರು.

Advertisement

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠೆ ಕಣವಾಗಿದ್ದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ನಗರದ ನ್ಯೂ ಮಹಾರಾಣಿ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಫ‌ಲಿತಾಂಶ ಕ್ಷೇತ್ರದ ಮತದಾರರಿಗೆ ಸಂದ ಜಯವಾಗಿದೆ. 1983ರಲ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.

ಆ ನಂತರ 1983ರಿಂದ 2006ರವರೆಗೆ ನಾನು ಸಿದ್ದರಾಮಯ್ಯ ಜತೆಗೆ ನಿಂತು ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ 1994ರಲ್ಲಿ 35 ಸಾವಿರ ಮತಗಳ ಗೆಲುವು ಲಭಿಸಿತ್ತು. ಸಿದ್ದರಾಮಯ್ಯ ಅಂದೇ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. ಜೆಡಿಎಸ್‌ ಅವರಿಗೆ ಹಣಕಾಸು ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು ಎಂದು ಹೇಳಿದರು.

ಮಾತೇ ಮುಳುವಾಯಿತು: ಸಿದ್ದರಾಮಯ್ಯ ಜೆಡಿಎಸ್‌ ತೊರೆದ ಬಳಿಕ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡರ ಬಗ್ಗೆ ಮಾತನಾಡಿದ್ದರು. ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಯಡಿಯೂರಪ್ಪಬಗ್ಗೆ ಬಹುವಚನದಲ್ಲಿ ಮಾತನಾಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯಗೆ ಅವರ ಮಾತೇ ಮುಳುವಾಗಿದೆ.

ಅಲ್ಲದೆ 1983ರಿಂದ ಈತನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಸಿದ್ದರಾಮಯ್ಯ ಸಿಎಂ ಆದ ಬಳಿಕ ಕ್ಷೇತ್ರದ ಜನರು ಅಭಿವೃದ್ಧಿ ಕನಸು ಕಂಡಿದ್ದರು. ಅದು ನನಸಾಗಲಿಲ್ಲ. ಮುಖ್ಯವಾಗಿ ಸಿದ್ದರಾಮಯ್ಯ ತಮ್ಮನ್ನು ಬೆಳೆಸಿದವರನ್ನು ತಿರಸ್ಕಾರದಿಂದ ನೋಡಿದರು.

Advertisement

ಇದು ಕಾಂಗ್ರೆಸ್‌ ಸೋಲಲ್ಲ, ಸಿದ್ದರಾಮಯ್ಯನ ಸೋಲು. ವರುಣಾದಲ್ಲಿ ಸ್ಪರ್ಧೆ ಮಾಡಿದ್ದರೆ ಗೆಲ್ಲುತ್ತಿದ್ದರು, ಆಗ ರಾಜ್ಯದಲ್ಲಿ ಪ್ರವಾಸ ಮಾಡಬಹುದಿತ್ತು. ಇದರಿಂದ ಕಾಂಗ್ರೆಸ್‌ ಇನ್ನೂ 20 ಸೀಟ್‌ ಹೆಚ್ಚಾಗುತ್ತಿತ್ತು. ಆದರೆ ಜಿ.ಟಿ.ದೇವೇಗೌಡನನ್ನು ಸೋಲಿಸಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದು ಅವರ ಸೋಲಿಗೆ ಕಾರಣ ಎಂದು ಟೀಕಿಸಿದರು.

ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ವಿಶ್ವಾಸವಿದ್ದು, ಅದು ಸಾಧ್ಯವಾದರೆ ನನಗೆ ಜಿಲ್ಲಾಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಲ್ಲ, ಬಿ.ಎಸ್‌.ಯಡಿಯೂರಪ್ಪ150 ಸ್ಥಾನ ಗೆಲ್ಲುವುದಕ್ಕಿಂತ ಸಿದ್ದರಾಮಯ್ಯ ಸೋಲಿಸೋದು ಮುಖ್ಯ ಎನ್ನುತ್ತಿದ್ದರು. ಜತೆಗೆ ಮೋದಿ ಅವರನ್ನು ಟೀಕಿಸಿದ್ದು ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next