ಮೈಸೂರು: ಅಲ್ಪ ಸಂಖ್ಯಾತರ ಮತ ಪಡೆಯಲು ಕಾಂಗ್ರೆಸ್ ನಾಯಕರು ಜೊಲ್ಲು ಸುರಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಹಿಂದೂ ಪದ ಕುರಿತು ಅಶ್ಲೀಲವಾಗಿ ಮಾತನಾಡಿದ್ದ ಸತೀಶ್ ಜಾರಕೊಹೊಳಿ ಅವರು ವಿಷಾದದ ಮಾತನ್ನು ಹೇಳಿದ್ದಾರೆ. ಹೇಳೋದೆಲ್ಲ ಹೇಳಿ ಅದೇನೋ ಆಯಿತು ಎನ್ನುವ ಗಾದೆಯಂತೆ ಈಗ ವಿಷಾದ ವ್ಯಕ್ತಪಡಿಸಿದರೆ ಜನ ನಂಬಲ್ಲ. ಅಲ್ಪ ಸಂಖ್ಯಾತರನ್ನು ಓಲೈಸಿಕೊಂಡು ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಬರೀ ಜೊಲ್ಲು ಸುರಿಸುವುದೇ ಆಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಬಂದಾಗ ಅಲ್ಪಸಂಖ್ಯಾತರನ್ನು ಓಲೈಸುವುದು ಹಳೆಯ ಕಲೆ ಆಗಿದೆ. ಮುಂದೆ ಅವರಿಗೆ ತಕ್ಕ ಪ್ರತಿಫಲ ಸಿಗಲಿದೆ ಎಂದರು.
ಸಿಐಡಿ ವರದಿ ಬಂದ ನಂತರ ಪರೀಕ್ಷೆ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಂತಿಮ ವರದಿ ಕೊಡುವವರೆಗೆ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದರು.
Related Articles
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ಅಕ್ರಮ ನೇಮಕಾತಿ ಕುರಿತಂತೆ ತನಿಖೆ ನಡೆಯುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ 107 ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂತಹ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಅಕ್ರಮ ಕುರಿತು ಸಿಐಡಿ ಅಂತಿಮ ವರದಿ ನೀಡುವ ತನಕ ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಲಾಭಿ, ಒತ್ತಡದ ಪ್ರಶ್ನೆಯಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ಸುಧಾರಿಸಲು ಮತ್ತು ತ್ವರಿತಗತಿಯಲ್ಲಿ ಪ್ರಕರಣ ದಾಖಲಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಆನ್ ಲೈನ್ ನಲ್ಲಿ ದೂರು ದಾಖಲು, 112 ಸಹಾಯವಾಣಿಗೆ ಕರೆ ಮಾಡಿದರೆ ನಗರ ಪ್ರದೇಶದಲ್ಲಿ 9 ನಿಮಿಷ, ಗ್ರಾಮಾಂತರ ಪ್ರದೇಶದಲ್ಲಿ 20 ನಿಮಿಷಕ್ಕೆ ಹಾಜರಾಗಿ ಕ್ರಮ ಕೈಗೊಳ್ಳಲಾಗುವುದು. ವಂಚನೆ ಪ್ರಕರಣಗಳಲ್ಲಿ ಶಿಸ್ತುಕ್ರಮಕ್ಕೆ ಬದಲಾವಣೆ ತರಲಾಗಿದೆ. ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯನ್ನು ಈಗಾಗಲೇ ತೆರೆಯಲಾಗಿದೆ. ಮಹಿಳಾ ಠಾಣೆಯಿದ್ದರೂ ಸಾಮಾನ್ಯ ಠಾಣೆಗಳಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರುವುದು ಕಡ್ಡಾಯವಾಗಿದೆ. ಕೆಲವೆಡೆ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶೇ.35ರಷ್ಟು ಹುದ್ದೆಗಳು ಖಾಲಿ ಇದ್ದವು. ಈಗ 12 ಸಾವಿರಕ್ಕೆ ಬಂದು ನಿಂತಿದೆ. ಮತ್ತೆ 5 ಸಾವಿರ ಪೊಲೀಸರ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿ ಸ್ವಂತ ಕಟ್ಟಡ ಇಲ್ಲದ ಠಾಣೆಗಳಿಗೆ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, 117 ಕೋಟೆ ವೆಚ್ಚದಲ್ಲಿ ಹೊಸ ಠಾಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಹರಿಯಾಣದಲ್ಲಿ ನಡೆದ ಅಖಿಲ ಭಾರತ ಗೃಹ ಸಚಿವರ ಸಮ್ಮೇಳನದಲ್ಲಿ ಕರ್ನಾಟಕ ಪೊಲೀಸ್ ಬಗ್ಗೆ ಪ್ರಸಂಶೆ ವ್ಯಕ್ತವಾಗಿದೆ ಎಂದು ತಿಳಿಸಿದರು.