Advertisement

Congress: ಪಕ್ಷ ಸೇರುವವರ “ಯೋಗ್ಯತೆ” ನೋಡಿ: ಖರ್ಗೆ

10:23 PM Jan 26, 2024 | Team Udayavani |

ಬೆಂಗಳೂರು: “ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆ-ಮುನ್ನೆಲೆ ತಿಳಿದುಕೊಂಡು ಅನಂತರ ಮುಂದುವರಿಯಬೇಕು. ಹೀಗೆ ಬಂದು, ಹಾಗೆ ಹೋಗುವವರನ್ನೆಲ್ಲ ಸೇರಿಸಿಕೊಳ್ಳಬಾರದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು. ಈ ಮೂಲಕ “ಆಪರೇಷನ್‌ ಹಸ್ತ” ಮಾಡುವಾಗ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸೂಚಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ನಾವು ಯಾವುದೇ ವಸ್ತು ಖರೀದಿಸುವಾಗ ಅದರ ಗುಣಮಟ್ಟ ತಿಳಿದುಕೊಳ್ಳುತ್ತೇವೆ. ಅಳೆದು-ತೂಗಿ ಮನೆಗೆ ತೆಗೆದುಕೊಂಡು ಬರುತ್ತೇವೆ. ಅದೇ ರೀತಿ ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ ಅವರ ಗುಣ ಎಂಥದ್ದು, ಹಿನ್ನೆಲೆ ಏನು, ಅವರು ಯಾವ ತತ್ವ ಪಾಲಿಸುತ್ತಿದ್ದವರು, ಈಗ ಯಾವ ತತ್ವ ಒಪ್ಪಿಕೊಳ್ಳುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ಜಗದೀಶ ಶೆಟ್ಟರ್‌ ಹೆಸರು ಪ್ರಸ್ತಾವಿಸದೆ ಸೂಚ್ಯವಾಗಿ ಹೇಳಿದರು.
ಕಾಂಗ್ರೆಸ್‌ ತತ್ವ ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ತತ್ವಕ್ಕಾಗಿಯೇ ಪಕ್ಷದಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಪಕ್ಷ ತತ್ವಕ್ಕೆ ಬದ್ಧವಾಗಿದೆ. ಅದನ್ನು ನೆಚ್ಚಿಕೊಂಡು ಬರಬೇಕು. ನಮ್ಮೊಂದಿಗೆ ಸೇರಿಕೊಂಡು ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುವಂತಿರಬೇಕು. ಪಕ್ಷಕ್ಕೆ ನಿಷ್ಠಾವಂತರಾಗಿರಬೇಕು. ಇಂದು ಬಂದು, ನಾಳೆ ಹೋಗುವಂತೆ ಇರಬಾರದು ಎಂದರು.

ಸಂವಿಧಾನ ಉಳಿದರಷ್ಟೇ ಮುಂದಿನ ಪೀಳಿಗೆ
ಕಾಂಗ್ರೆಸ್‌ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಆದರೆ ಬಿಜೆಪಿ ಈಗ ತಾನೇ ಈ ದೇಶವನ್ನು ಕಾಪಾಡುತ್ತಿರುವುದು, ನಾವೇ ನಿಜವಾದ ದೇಶ ಭಕ್ತರು. ಉಳಿದವರೆಲ್ಲರೂ ದೇಶದ್ರೋಹಿಗಳು ಎನ್ನುವ ಭಾವನೆಯನ್ನು ಯುವಕರಲ್ಲಿ ಮೂಡಿಸುತ್ತಿದೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ಪೀಳಿಗೆ ಎಲ್ಲದರಲ್ಲೂ ಅವಕಾಶ ವಂಚಿತವಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂವಿಧಾನ ತಿರುಚಬೇಕೆಂದು, ಸಂವಿಧಾನ ಬದಲಿಸಬೇಕೆಂದು ಆರೆಸ್ಸೆಸ್‌ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ನಾಶ ಮಾಡುತ್ತ, ಅವುಗಳ ಶಕ್ತಿಯನ್ನು ಕಡಿಮೆ ಮಾಡಲು ಬಿಜೆಪಿ ಸರ್ವಪ್ರಯತ್ನ ಮಾಡುತ್ತಿದೆ. ಪ್ರಧಾನಿ ಮೋದಿ ಆರೆಸ್ಸೆಸ್‌ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದು, ಅದರಿಂದ ನಮ್ಮ ದೇಶದ ನ್ಯಾಯಾಂಗಕ್ಕೆ, ಜಾತ್ಯತೀತತೆಗೆ ಪೆಟ್ಟು ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next