ಚಿತ್ರದುರ್ಗ: ಕಾಂಗ್ರೆಸ್ ಡರ್ಟಿ ಪೊಲಿಟಿಕ್ಸ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸಿರಿಗೆರೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದಾದರೂ ವಿಚಾರ ಇದ್ದರೆ ನೇರಾನೇರಾ ಮಾತಾಡಬೇಕು, ದಾಖಲೆ ಕೊಡಬೇಕು, ತನಿಖೆ ಆಗಬೇಕು. ಕಾಂಗ್ರೆಸ್ ಪಕ್ಷದ್ದು ನೈತಿಕತೆಯ ಅಧಃಪತನ, ಹೆಸರು ಕೆಡಿಸುವ ಕಾರ್ಯಕ್ರಮವಿದು. ಅವರು ಹತಾಶರಾಗಿದ್ದಾರೆ. ಪೂರ್ಣ ಪ್ರಮಾಣದ ತಯಾರಿ ಇಲ್ಲದೆ ಸದನಕ್ಕೆ ಬರುವುದು, ಜನಪರ ಕಾಳಜಿ ಇಲ್ಲ, ಈ ರೀತಿಯ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರುತ್ತೇವೆ ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಇದು ಸಾಧ್ಯವಿಲ್ಲ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಕಲಬುರಗಿ: ಗಾಂಜಾ ದಂಧೆಕೋರರಿಂದ ಸಿಪಿಐ- ಪೊಲೀಸರ ಮೇಲೆ ಮಾರಣಾಂತಿಕ ದಾಳಿ
ಲಿಂಗಾಯತ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಸಂಪುಟದ ವಿಸ್ತರಣೆ ಕುರಿತು ದೆಹಲಿಗೆ ಹೋಗಿ ಬಂದ ನಂತರ ತಿಳಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಮಾತನಾಡಿದ ಸಿಎಂ, ಎಲ್ಲ ಸಮೀಕ್ಷೆಗಳು ಒಂದೊಂದು ರೀತಿ ಬರುತ್ತವೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ, 35 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.