Advertisement

ಸಚಿವರ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

11:13 PM May 02, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಮತ್ತು ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಪ್ರಕರಣಗಳ ಹಿನ್ನೆಲೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರು ನೈತಿಕ ಹೊಣೆ ಹೊತ್ತು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ಕೆಪಿಸಿಸಿ ಕಚೇರಿಯಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಸಂಸದರಾದ ವಿ.ಎಸ್‌.ಉಗ್ರಪ್ಪ ಹಾಗೂ ಚಂದ್ರಪ್ಪ ಅವರು, ಇಬ್ಬರು ಸಚಿವರು ಸಂಪುಟದಲ್ಲಿ ಇರಲು ಅರ್ಹರಲ್ಲ ಎಂದು ಹೇಳಿದರು.

ಮಾಜಿ ಸಚಿವ ಎಚ್‌. ಎಂ. ರೇವಣ್ಣ ಮಾತನಾಡಿ, ದೇಶದಲ್ಲೇ ಅತಿ ಭ್ರಷ್ಟ 40 ಪರ್ಸೆಂಟ್‌ ಸರಕಾರ ರಾಜ್ಯದಲ್ಲಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಇತರ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

ನೇಮಕಾತಿ ವಿಭಾಗದ ಎಐಡಿಜಿಯನ್ನು ಸರಕಾರ ವರ್ಗಾವಣೆ ಮಾಡಿರುವುದನ್ನು ನೋಡಿದರೆ ಇದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.

ಪ್ರಧಾನಿ ಮೋದಿ ಅವರು “ನಾನು ತಿನ್ನೋದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ’ ಎನ್ನುತ್ತಿದ್ದರು. ಆದರೆ ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಪ್ರಧಾನಿ ಕಚೇರಿ ಯಿಂದಲೇ ಇಂಥ ಅಕ್ರಮಗಳ ಪಾಲನೆ ಪೋಷಣೆ ಆಗುತ್ತಿದೆಯೇ ಎಂಬ ಶಂಕೆ ಕಾಡುತ್ತಿದೆ ಎಂದರು.

Advertisement

ಸಿದ್ದರಾಮಯ್ಯ ವಿರುದ್ಧ ಅಕ್ರಮದ ಆರೋಪ ಹೊರಿ ಸುವ ಸಿ.ಟಿ.ರವಿ ದಾಖಲೆ ಸಹಿತ ಬರಲಿ ಎಂದರು.

ಯತ್ನಾಳ್‌ಗೂ ನೋಟಿಸ್‌ ನೀಡಿ
ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಶಾಸಕ ಬಸನಗೌಡ ಯತ್ನಾಳ್‌ ಮತ್ತು ಸಿ.ಟಿ. ರವಿ ಅವರಿಗೆ ಪುಂಗಿ ಊದುವುದೇ ಕೆಲಸವಾಗಿದೆ. ಪಿಎಸ್‌ಐ ನೇಮಕಾತಿ ಸಹಿತ ಅನೇಕ ಇಲಾಖೆಗಳ ಹಗರಣಗಳ ಬಗ್ಗೆ ಯತ್ನಾಳ್‌ ಮಾತನಾಡಿದ್ದಾರೆ. ಪೊಲೀಸರು ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌ ನೀಡಿದಂತೆ ಯತ್ನಾಳ್‌ಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಲಿ ಎಂದು ಆಗ್ರಹಿಸಿದರು.

ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ವಿಜಯಪುರ: ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರ ಸಹೋದರ ಸತೀಶ ಮಾತ್ರವಲ್ಲ, ಬೇರೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮವಾಗಬೇಕು. ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬಬಲೇಶ್ವರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಅವರು ಸಚಿವರ ಸಹೋದರನ ಕೈವಾಡವಿದೆ ಎಂದು ಆರೋಪ ಮಾಡಿದ್ದರಲ್ಲಿ ಸಾಕ್ಷಿ ಇದ್ದರೆ ಸರಕಾರ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next