ಕೋಲಾರ: ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕೂಡಾ ಅಷ್ಟೇ ಸತ್ಯ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಶನಿವಾರ ಕೋಲಾರದ ಇತಿಹಾಸ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ, ರಾಹುಲ್ ಗಾಂಧಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಂದಿರುವುದು ಶುಭ ಸಂಕೇತ. ಹೀಗಾಗಿ ನಮಗೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಮಿಷನ್ 150 ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅಮಿತ್ ಶಾ ಬಂದು ಹೋದ ಮೇಲೆ ಪರಿಸ್ಥಿತಿ ಅರ್ಥವಾಗಿದ್ದು, ಮಿಷನ್ 150+ ಆಗಿದೆ ಎಂದು ವ್ಯಂಗ್ಯವಾಡಿದರು.