ಕಾರ್ಕಳ: ಕಾಂಗ್ರೆಸ್ ಪಕ್ಷವು ಕೆಲವು ಅವಧಿಗಳನ್ನು ಹೊರತುಪಡಿಸಿ 70 ವರ್ಷಗಳ ತನ್ನ ಆಡಳಿತಾವಧಿಯಲ್ಲಿ ದೇಶವನ್ನು ಸರ್ವಧರ್ಮ ಸಮನ್ವಯತೆಯ ಭದ್ರ ಬುನಾದಿಯೊಂದಿಗೆ ಪ್ರಪಂಚದ ಬಲಿಷ್ಠ ಆರ್ಥಿಕತೆಯ ಶಕ್ತಿಶಾಲಿ ರಾಷ್ಟ್ರವನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ದೇಶದ ಜನತೆಯ ಉತ್ಕಟ ಆಕಾಂಕ್ಷೆಯ ಫಲಶ್ರುತಿಯಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಜನರ ಭಾವನೆಗಳಿಗೆ ಸ್ಪಂದಿಸದೇ ಈ ದೇಶದ ಸುಭದ್ರ ಸಾಮಾಜಿಕ ಆರ್ಥಿಕ ಸಂಪನ್ನತೆಯ ಕೊರಳು ಕೊಯ್ಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.
ಅವರು ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕುಕ್ಕುಂದೂರು ವಲಯ ಕಾರ್ಯಕರ್ತರ ಚೆ„ತನ್ಯ ಧಾರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಬೂತ್ ಮಟ್ಟದ ಕಾರ್ಯಕರ್ತರ ಮತ್ತು ಯುವ ಕಾರ್ಯಕರ್ತರ ಕರ್ತವ್ಯಗಳ ಬಗ್ಗೆ ಮಾರ್ಗಸೂಚಿಯ ವಿವರ ನೀಡಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಮತದಾರರ ಪಟ್ಟಿ ಸೇರ್ಪಡೆಯ ಬಗ್ಗೆ ಮಾಹಿತಿ ನೀಡಿ ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಪ್ರಯತ್ನ ಕಾರ್ಯಕರ್ತರು ಮಾಡಬೇಕು ಎಂದರು.
ಕುಕ್ಕುಂದೂರು ವಲಯ ಅಧ್ಯಕ್ಷ ತೋಮಸ್ ಮಸ್ಕರೇನಸ್, ಗ್ರಾಮ ಮಟ್ಟದ ಬೂತ್ ಸಮಿತಿಯನ್ನು ರಚಿಸುವ ಬಗ್ಗೆ ಬೂತ್ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಬೂತ್ ಸಮಿತಿಯ ವಿವರ ಸಲ್ಲಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ರಾಜ್ಯ ಯುವಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ ಶೇರಿಗಾರ್, ಹಿರಿಯರಾದ ತಿಮ್ಮಪ್ಪ ಕಿಣಿ, ಶ್ಯಾಮ ಶೆಟ್ಟಿ, ಪಂ.ಸದಸ್ಯರಾದ ವಿಶ್ವನಾಥ ಭಂಡಾರಿ, ರುಕ್ಮಯ್ಯ ಶೆಟ್ಟಿಗಾರ್, ಶಾಂತಿ ಕಿಣಿ, ಶಬ್‌ನಮ್, ಜಾನೇಟ್ ಡಿಮೆಲ್ಲೋ, ಸಮಾಜ ಸೇವಕರಾದ ಸತೀಶ ರಾವ್, ವಿನ್ನಿಬಾಬು ನಕ್ರೆ, ಸಹೀಮ್, ಜಾವೇದ್, ಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.
ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ದಯಾನಂದ ಶೆಟ್ಟಿ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಕ್ರೆ ಜಾರ್ಜ್ ಕ್ಯಾಸ್ತಲಿನೋ ವಂದಿಸಿದರು.