Advertisement

ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಕೈ ಪೈಪೋಟಿ

12:00 AM Jul 25, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹುಮ್ಮಸ್ಸಿನಲ್ಲಿದ್ದರೆ, ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷದ ನಾಯಕನಾಗಲು ಆಂತರಿಕ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸಿ, ಪ್ರತಿಪಕ್ಷದ ನಾಯಕರನ್ನಾಗಿ ಬೇರೆಯವರನ್ನು ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್‌ ಹೈ ಕಮಾಂಡ್‌ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

Advertisement

ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ನಾಯಕರೇ ಪ್ರತಿಪಕ್ಷದ ನಾಯಕಾಗಿ ಕಾರ್ಯ ನಿರ್ವಹಿಸುವುದು ವಾಡಿಕೆ, ಆದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಬದಲಿಗೆ ಪ್ರತಿಪಕ್ಷದ ನಾಯಕರಾಗಲು ಮೂವರು ಹಿರಿಯ ನಾಯಕರು ತೆರೆ ಮರೆಯ ಕಸರತ್ತು ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕೇಂದ್ರದಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿಯಾಗಿದ್ದು, ಲೋಕಸಭೆಗೆ ಅಧೀರ್‌ ರಂಜನ್‌ ಚೌಧರಿ ಪ್ರತಿಪಕ್ಷದ ನಾಯಕರಾಗಿದ್ದರೆ, (ಸಂಸತ್ತಿನ ಕನಿಷ್ಠ ಶೇ.10 ರಷ್ಟು ಸಂಖ್ಯಾಬಲದ ಕೊರತೆಯಿಂದ ಕಾಂಗ್ರೆಸ್‌ಗೆ ಅಧಿಕೃತ ಪ್ರತಿಪಕ್ಷದ ನಾಯಕನ ಸ್ಥಾನ ದೊರೆತಿಲ್ಲ) ರಾಜ್ಯಸಭೆಯಲ್ಲಿ ಗುಲಾಂ ನಬಿ ಆಝಾದ್‌ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರು ತಮ್ಮ ಪಕ್ಷದ ಎರಡೂ ಸದನಗಳ ಶಾಸಕರಿಗೆ (ವಿಧಾನ ಸಭೆ ಹಾಗೂ ವಿಧಾನ ಪರಿಷತ್‌) ನಾಯಕರಾಗಿದ್ದಾರೆ. ಹೀಗಾಗಿ ಶಾಸಕಾಂಗ ಪಕ್ಷದ ನಾಯಕರಲ್ಲದವರನ್ನೂ ವಿಧಾನಸಭೆಯ ಪ್ರತಿಪಕ್ಷದ ನಾಯಕರನ್ನಾಗಿ ಮಾಡಲು ಕಾಂಗ್ರೆಸ್‌ನಲ್ಲಿ ಕಸರತ್ತು ನಡೆಯುತ್ತಿದೆ.

ಈ ಹಿಂದೆ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಹಾಗೂ ಹಾಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಹಿರಿಯ ನಾಯಕರಾದ ಆರ್‌.ವಿ.ದೇಶಪಾಂಡೆ, ಎಚ್‌.ಕೆ. ಪಾಟೀಲ್‌, ಡಾ. ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಮಂಗಳವಾರ ರಾತ್ರಿಯೇ ಡಿ.ಕೆ.ಶಿವಕುಮಾರ್‌ ಕೆಲವು ಆಪ್ತ ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಹಿಡಿತ ತಪ್ಪಿಸಲು ತಂತ್ರ: ಸಿದ್ದರಾಮಯ್ಯ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಈಗಾಗಲೇ ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಪಕ್ಷದ ವಲಯದಲ್ಲಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮಾತ್ರ ಮುಂದುವರೆಸಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬೇರೆಯವರಿಗೆ ನೀಡಿದರೆ, ಪರ್ಯಾಯ ನಾಯಕತ್ವ ಇರುವುದರಿಂದ ಪಕ್ಷದಲ್ಲಿ ಏಕಪಕ್ಷೀಯ ನಿರ್ಧಾರಗಳು ಆಗುವುದನ್ನು ತಡೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಹೈ ಕಮಾಂಡ್‌ ಹೊಂದಿದೆ ಎಂದು ಹೇಳಲಾಗುತ್ತಿದೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕರನ್ನು ಬೇರೆಯವರನ್ನು ಮಾಡಲು ಅವಕಾಶವಿದೆ. ಶಾಸಕಾಂಗ ಪಕ್ಷದ ನಾಯಕ ಎರಡೂ ಸದನಗಳ ನಮ್ಮ ಪಕ್ಷದ ಶಾಸಕರಿಗೆ ನಾಯಕರಾಗಿತ್ತಾರೆ. ಪ್ರತಿಪಕ್ಷದ ನಾಯಕರು ಎರಡೂ ಸದನಗಳಿಗೂ ಬೇರೆ ಬೇರೆ ಇರುತ್ತಾರೆ. ಕೇಂದ್ರದಲ್ಲಿ ಸೋನಿಯಾ ಗಾಂಧಿ ಸಂಸದೀಯ ಪಕ್ಷದ ನಾಯಕಿಯಾಗಿದ್ದರೂ. ಎರಡೂ ಸದನಗಳ ಪ್ರತಿಪಕ್ಷಗಳ ನಾಯಕರು ಬೇರೆ ಇದ್ದಾರೆ.
-ಬಿ.ಎಲ್‌.ಶಂಕರ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next