Advertisement

ಮೇಲ್ಮನೆ 3 ಸ್ಥಾನಗಳಿಗೆ Congress ಪೈಪೋಟಿ

12:38 AM Jun 07, 2023 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಜೂ. 30ರಂದು ಉಪಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಆರಂಭವಾಗಿದೆ.

Advertisement

ಮಂಗಳವಾರ ಹೊರಬಿದ್ದಿರುವ ಚುನಾವಣ ಆಯೋಗದ ಪ್ರಕಟನೆ ಪ್ರಕಾರ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪ ಚುನಾವಣೆ ನಡೆಯುವುದರಿಂದ ಮೂರು ಸ್ಥಾನಗಳೂ ಆಡಳಿತ ಪಕ್ಷದ ಪಾಲಾಗಲಿವೆ. ಹೀಗಾಗಿ ಟಿಕೆಟ್‌ ಗಿಟ್ಟಿಸಲು ವಿಧಾನಸಭೆ ಚುನಾವಣೆಯ ಟಿಕೆಟ್‌ ವಂಚಿತರು, ಹಿರಿಯ ನಾಯಕರು, ಕಾರ್ಯಕರ್ತರು, ಮಹಿಳಾ ನಾಯಕರು ಭಾರೀ ಲಾಬಿ ಮಾಡತೊಡಗಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಗುರುಮಿಟಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಅವರು ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮರು ಆಯ್ಕೆ ಆಗುವ ಸಾಧ್ಯತೆ ಇದೆ. ಇವರ ಅವಧಿ 2024ರ ಜೂ.17ರ ವರೆಗೆ ಇತ್ತು. ಹೀಗಾಗಿ ಚಿಂಚನಸೂರು ಅವರಿಗೆ ಟಿಕೆಟ್‌ ಖಾತರಿಯೆಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವುದೇ ಸದನದ ಸದಸ್ಯರಾಗದಿದ್ದರೂ ಸಚಿವರಾಗಿರುವ ಎನ್‌.ಎಸ್‌. ಬೋಸರಾಜು ಅವರಿಗೆ 6 ತಿಂಗಳೊಳಗೆ ಪರಿಷತ್‌ ಪ್ರವೇಶ ಅನಿವಾರ್ಯ. ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಅಥಣಿಯಿಂದ ಗೆದ್ದಿರುವ ಲಕ್ಷ್ಮಣ ಸವದಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬೋಸರಾಜು ಅಭ್ಯರ್ಥಿ ಯಾಗುವ ಸಾಧ್ಯತೆಗಳಿವೆ. ಸವದಿ ಸ್ಥಾನದ ಅವಧಿ 2028ರ ಜೂ.14ರ ವರೆಗೆ ಇದೆ. ಈ ಸ್ಥಾನಕ್ಕೆ ಬೋಸರಾಜು ಆಯ್ಕೆ ಖಚಿತವಾಗಿದೆ.

ಷರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಶಂಕರ್‌ ಸ್ಥಾನದ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಈ ಸ್ಥಾನದ ಅವಧಿ 2026ರ ಜೂ. 30ರ ವರೆಗೆ ಇದೆ. ಈ ಹಿಂದೆ ಕೇವಲ ಒಂದೂವರೆ ವರ್ಷ ಪರಿಷತ್‌ ಸದಸ್ಯರಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ. ವೇಣುಗೋಪಾಲ್‌ ಅವರಿಗೆ ಅನಂತರ ಅವಕಾಶ ದೊರೆತಿರಲಿಲ್ಲ. ಈಗ ಮತ್ತೆ ತಮಗೆ ಅವಕಾಶ ಒದಗಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next