Advertisement

ನಗರಸಭೆ ಚುಕ್ಕಾಣಿಗಾಗಿ ಕಾಂಗ್ರೆಸ್‌ ಕಸರತ್ತು

05:51 PM Jan 22, 2022 | Team Udayavani |

ಗದಗ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಜ.24 ರಂದು ನಡೆಯಲಿದ್ದು, ಅಧಿಕಾರಕ್ಕೇರಲು ಬಿಜೆಪಿ ಹಾಗೂ ಕಾಂಗ್ರೆಸ್‌ ರಾಜಕೀಯ ರಣತಂತ್ರ ರೂಪಿಸಿವೆ. ಈ ನಡುವೆ ಪಕ್ಷೇತರ ಸದಸ್ಯರೊಬ್ಬರು “ಕೈ’ ಹಿಡಿದಿದ್ದರಿಂದ ನಗರಸಭೆಯಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆಯಾಗಿದೆ. ಶತಾಯ ಗತಾಯ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್‌, ಸದ್ದಿಲ್ಲದೇ ಅನ್ಯ ಜಿಲ್ಲೆಯ ಮೇಲ್ಮನೆ ಸದಸ್ಯರ ಮೊರೆ ಹೋಗಿದೆ.

Advertisement

ಗದಗ- ಬೆಟಗೇರಿ ನಗರಸಭೆಗೆ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 35 ವಾರ್ಡ್‌ಗಳ ಪೈಕಿ ಬಿಜೆಪಿ 18, ಕಾಂಗ್ರೆಸ್‌ 15 ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. 18 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರಕ್ಕೇರಲು ಸರಳ ಬಹುಮತ ಪಡೆದುಕೊಂಡಿದೆ. ಜೊತೆಗೆ ಸಂಸದ ಶಿವಕುಮಾರ ಉದಾಸಿ ಬೆಂಬಲದಿಂದ ಬಿಜೆಪಿ ಸದಸ್ಯರ ಸಂಖ್ಯೆ 19ಕ್ಕೆ ಏರಿಕೆಯಾಗಲಿದೆ. ಈ ನಡುವೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹುಬ್ಬಳ್ಳಿಗೆ ತಮ್ಮ ಹಕ್ಕು ಸ್ಥಳಾಂತರಿಸಿಕೊಂಡಿದ್ದಾರೆ. ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಗದಗಿಗೆ ಸ್ಥಳಾಂತರಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗಿದೆ.

ಫಲಿಸದ ಆಪರೇಷನ್‌ ಕಮಲ: ಈ ಬಾರಿ ಶತಾಯಗತಾಯ ಅಧಿಕಾರಕ್ಕೇರಲು ಕಾಂಗ್ರೆಸ್‌ ಪಟ್ಟು ಹಿಡಿದಿದೆ. 15 ಚುನಾಯಿತ ಸದಸ್ಯರೊಂದಿಗೆ ಸ್ಥಳೀಯ ಶಾಸಕರು, ಇಬ್ಬರು ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್ಸಿಗರ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ. ನಗರಸಭೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಇಬ್ಬರು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸಿತ್ತು.

ಅದಕ್ಕೆ ಪ್ರತಿತಂತ್ರ ಹೂಡಿದ್ದ ಬಿಜೆಪಿ, ತನ್ನ ಸದಸ್ಯರಿಗೆ ಪಕ್ಷ ನಿಷ್ಠೆ, ಸಿದ್ಧಾಂತ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮನದಟ್ಟು ಮಾಡಿ, ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆಲ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ರವಾನಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಮೇಲ್ಮನೆ ಸದಸ್ಯರ ಮೊರೆಹೋದ ಕಾಂಗ್ರೆಸ್‌: ಆಪರೇಷನ್‌ ಕಮಲ ಕೈಗೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ವಿಧಾನ ಪರಿಷತ್‌ ಸದಸ್ಯರ ಮೊರೆ ಹೋಗಿದ್ದಾರೆ. ರಾಜ್ಯಸಭೆ ಸದಸ್ಯ ಡಾ| ಎಲ್‌.ಹನುಮಂತಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸಲೀಂ ಅಹ್ಮದ್‌, ಪ್ರಕಾಶ್‌ ರಾಥೋಡ್‌, ಮೋಹನ್‌ಕುಮಾರ್‌ ಕೊಂಡಜ್ಜಿ ಅವರು ವಾಸ ಸ್ಥಳ ಬದಲಾವಣೆಗಾಗಿ ಜ.14 ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವುದು ಜಿಲ್ಲೆಯ ರಾಜಕಿಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಕಾಂಗ್ರೆಸ್‌ ಲೆಕ್ಕಾಚಾರದಂತೆ ವಿಧಾನ ಪರಿಷತ್‌ ಸದಸ್ಯರ ವಾಸಸ್ಥಳ ಬದಲಾವಣೆಗೊಂಡು, ನಗರಸಭೆ ವ್ಯಾಪ್ತಿಯಲ್ಲಿ ಮತಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಂಡರೆ, ಕಾಂಗ್ರೆಸ್‌ ಸರಳವಾಗಿ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ ಎಂಬುದು ರಾಜಕಿಯ ನಾಯಕರ ವಿಶ್ಲೇಷಣೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next