ಜೈಪುರ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೂಂದು ಸುತ್ತಿನ ಬಿಕ್ಕಟ್ಟಿಗೆ ವೇದಿಕೆ ಸಿದ್ಧವಾಗಿದೆ. ಸಚಿನ್ ಪೈಲಟ್ ಟೀಂ ಈಗ ತಾಳ್ಮೆ ಕಳೆದುಕೊಂಡಿದ್ದು, ತತ್‌ಕ್ಷಣವೇ ಪೈಲಟ್‌ರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿದಿದೆ.
ಸೋಮವಾರ ಮಾತನಾಡಿರುವ ಸಚಿವ ಹೇಮರಾಮ್ ಚೌಧರಿ, “ಇನ್ನು ಮುಂದೆ ನಮಗೆ ಕಾಯಲಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಚಿನ್ ಪೈಲಟ್ ಅವರೇ ಕಾರಣ. ಅವರು ಪಟ್ಟ ಪರಿಶ್ರಮದಿಂದಾಗಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಹಾಗಾಗಿ ಅವರಿಗೆ ಜವಾಬ್ದಾರಿಯನ್ನು ವಹಿಸಬೇಕು. ಆದಷ್ಟು ಬೇಗ ಅವರನ್ನು ಸಿಎಂ ಮಾಡುವ ಕುರಿತು ಕೇಂದ್ರ ನಾಯಕತ್ವ ನಿರ್ಧಾರ ಕೈಗೊಳ್ಳಬೇಕು’ ಎಂದಿದ್ದಾರೆ.
ಸೆಪ್ಟೆಂಬರ್‌ನಲ್ಲೇ ಪೈಲಟ್ ಅವರು ಸಿಎಂ ಸ್ಥಾನಕ್ಕೇರಬೇಕಿತ್ತು. ಆದರೆ, ಆಗ ಸಿಎಂ ಅಶೋಕ್ ಗೆಹ್ಲೋಟ್ ಬಣದ ಶಾಸಕರು ರಾಜೀನಾಮೆಯ ಬೆದರಿಕೆಯೊಡ್ಡುವ ಮೂಲಕ ಈ ಪ್ರಕ್ರಿಯೆಗೆ ತಡೆ ತಂದಿದ್ದರು. ಇದರಿಂದ ಕ್ರುದ್ಧರಾಗಿದ್ದ ಸಚಿನ್, ಪಕ್ಷದ ಹಿತಾಸಕ್ತಿಯ ವಿರುದ್ಧ ಹೋದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದರು.
ಇನ್ನು 11 ತಿಂಗಳಲ್ಲೇ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿ.3ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜಸ್ಥಾನವನ್ನು ಪ್ರವೇಶಿಸಲಿದೆ. ಇದರ ನಡುವೆಯೇ, ಇಬ್ಬರು ಉನ್ನತ ನಾಯಕರ ನಡುವಿನ ಕಚ್ಚಾಟವು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.