ತಿರುವನಂತಪುರಂ: “2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಭಾರತವು “ಹಿಂದೂ ಪಾಕಿಸ್ಥಾನ’ವಾಗುತ್ತದೆ’ ಎಂದು ಸಂಸದ ಶಶಿ ತರೂರ್ ಹೇಳಿರು ವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದಕ್ಕೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದ್ದರೆ, ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಜತೆಗೆ, ಮಾತನಾಡು ವಾಗ ಹಾಗೂ ಪದಬಳಕೆ ಮಾಡುವಾಗ ಎಚ್ಚರಿಕೆಯಿರಲಿ ಎಂದು ತರೂರ್‌ಗೂ ಸೂಚಿಸಿದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಹಿಂದೂಗಳ ಮೇಲೆ ನಡೆಸಿದ ದಾಳಿ ಎಂದು ಬಿಜೆಪಿ ಆಕ್ಷೇಪಿಸಿದೆ. ಅಷ್ಟೇ ಅಲ್ಲ ಇದೊಂದು ಭ್ರಮೆ ಎಂದು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ಹೇಳಿದ್ದಾರೆ.
ಶಶಿ ತರೂರ್ ಹೇಳಿದ್ದೇನು?: ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಈಗಿನಷ್ಟೇ ಬಹುಮತದಿಂದ ಗೆದ್ದರೆ ನಮ್ಮ ಸಂವಿಧಾನ ಉಳಿಯುವುದಿಲ್ಲ. ಅವರು ಸಂವಿಧಾನವನ್ನು ಹರಿದು ಹಾಕಿ, ಹೊಸ ಸಂವಿಧಾನವನ್ನು ರಚಿಸುತ್ತಾರೆ. ಅದರಲ್ಲಿ ಹಿಂದೂ ರಾಷ್ಟ್ರವನ್ನು ಪ್ರಸ್ತಾವಿಸಲಾಗುತ್ತದೆ. ಅಲ್ಪಸಂಖ್ಯಾತರಿಗೆ ಸಮಾನತೆ ತೆಗೆದುಹಾಕಿ, ಹಿಂದೂ ಪಾಕಿಸ್ಥಾನವನ್ನು ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ನೆಹರು, ಸರ್ದಾರ್ ಪಟೇಲ್ ಬಯಸಿದ ಸಂಗತಿ ಇದಲ್ಲವೇ ಅಲ್ಲ.
ಶಶಿ ಸಮರ್ಥನೆ: ವಿವಾದ ತೀವ್ರ ಗೊಳ್ಳುತ್ತಿದ್ದಂತೆ ತನ್ನ ಹೇಳಿಕೆ ಸಮರ್ಥಿಸಿ ಕೊಂಡಿರುವ ತರೂರ್, ಬಿಜೆಪಿ ಹಾಗೂ ಆರೆಸ್ಸೆಸ್ ಅನುಸರಿಸುತ್ತಿರುವ ಹಿಂದೂ ರಾಷ್ಟ್ರ ಎಂಬ ಕಲ್ಪನೆ ಪಾಕಿಸ್ಥಾನದ ಪ್ರತಿಬಿಂಬ ಎಂದಿದ್ದಾರೆ.
ತನ್ನ ದೇಶ ಹಾಗೂ ತನ್ನ ದೇಶದ ಸಂವಿಧಾನದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ನಾಚಿಕೆಗೇಡು. ಈ ಮೂಲಕ ಸಂವಿಧಾನವನ್ನು ಅವಮಾನಿಸಿ ದ್ದಾರೆ. ಇದಕ್ಕೆ ರಾಹುಲ್ ಕ್ಷಮೆ ಕೇಳಿ, ಸ್ಪಷ್ಟನೆ ನೀಡಬೇಕು. ಪ್ರತಿ ಬಾರಿ ಕಾಂಗ್ರೆಸ್ಸಿಗರು ಮೋದಿ ಹಾಗೂ ಬಿಜೆಪಿ ವಿರುದ್ಧ ಮಾತನಾಡುವಾಗ ಯಾಕೆ ದೇಶವನ್ನು ಅವಮಾನಿಸುವ ಮಾತುಗಳನ್ನಾಡುತ್ತಾರೆ?
ಸಂಬಿತ್ ಪಾತ್ರ, ಬಿಜೆಪಿ ವಕ್ತಾರ
ಭಾರತದಲ್ಲಿ ಯಾವ ಪಕ್ಷ ಅಧಿಕಾರಕ್ಕೇರಿದರೂ, ದೇಶವು ಪಾಕಿಸ್ಥಾನವಾಗಲು ಬಿಡುವುದಿಲ್ಲ. ಪ್ರತಿಯೊಬ್ಬ ನಾಯಕರು ಹಾಗೂ ಕಾರ್ಯಕರ್ತರೂ ತಮ್ಮ ಹೇಳಿಕೆ ಯಲ್ಲಿ ಔಚಿತ್ಯ ಮೀರಬಾರದು.
ಶೆರ್ಗಿಲ್, ಕಾಂಗ್ರೆಸ್ ವಕ್ತಾರ
ತರೂರ್ ಸುಶಿಕ್ಷಿತ ವ್ಯಕ್ತಿ. ಲೇಖಕ ಹಾಗೂ ಸಂಸದ. ವಿದೇಶಾಂಗ ವ್ಯವಹಾರಗಳ ಸಂಸತ್ ಸಮಿತಿಯ ಮುಖ್ಯ ಸ್ಥರೂ ಹೌದು. ಅವರು ಏನೇ ಹೇಳಿದರೂ, ಸೂಕ್ತವಾಗಿ ಯೋಚಿಸಿಯೇ ಹೇಳಿರುತ್ತಾರೆ.
ಹಮೀದ್ ಅನ್ಸಾರಿ, ಮಾಜಿ ಉಪರಾಷ್ಟ್ರಪತಿ