Advertisement
“ಕೈ’ ಬಾಕಿ ಉಳಿಸಿಕೊಂಡ ಈ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಇದೆ. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಗೆ ಗಡುವು ವಿಧಿಸುವ ಮೂಲಕ ಎಚ್ಚರಿಕೆ ನೀಡಿರುವ ಜಗದೀಶ ಶೆಟ್ಟರ್ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವೂ ಇದೆ. ಇದರ ಜತೆಗೆ ಪ್ರಸ್ತುತ ತಮ್ಮ ಶಾಸಕರೇ ಇರುವ 4 ಕ್ಷೇತ್ರಗಳೂ “ಬಾಕಿ ಪಟ್ಟಿ’ಯಲ್ಲಿವೆ. ಈ ಎಲ್ಲ ಅಂಶಗಳಿಂದ ನಾಲ್ಕನೇ ಪಟ್ಟಿ ಕುತೂಹಲದ ಕೇಂದ್ರಬಿಂದು ಆಗಿದೆ.
Related Articles
Advertisement
ಇನ್ನು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತರಾಗಿದ್ದ ಎಚ್.ಡಿ. ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜತೆಗೆ ಬಿ.ಎಚ್. ಹರೀಶ್, ಮಹಡಿಮನೆ ಸತೀಶ್ ಕೂಡ ರೇಸ್‌ನಲ್ಲಿದ್ದಾರೆ. ಅಂತಿಮವಾಗಿ ಟಿಕೆಟ್ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕಾದುನೋಡಬೇಕು.
ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸ ಮತ್ತು ಸಂಪತ್‌ರಾಜ್ ನಡುವೆ ತೀವ್ರ ಪೈಪೋಟಿ ಇದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮೂರನೇ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ಮುಳ್ಳಾಗಿದೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರವನ್ನೂ “ಕೈ’ ಬಾಕಿ ಉಳಿಸಿಕೊಂಡಿದೆ. ಅಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರುದ್ಧ ಸ್ಪರ್ಧಿಸಿದ್ದ ಇಸ್ಮಾಯಿಲ್ ತಮಟಗಾರ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮೋಹನ ಲಿಂಬಿಕಾಯಿ ಸೇರಿದಂತೆ ಹಲವರು ಆಕಾಂಕ್ಷಿಯಾಗಿದ್ದಾರೆ. ಅರಕಲಗೂಡಿನಲ್ಲಿ ಕೃಷ್ಣೇಗೌಡ ಹಾಗೂ ಶ್ರೀಧರ ಗೌಡ ನಡುವೆ ತೀವ್ರಪೈಪೊಟಿ ಏರ್ಪಟ್ಟಿದೆ. ಸಿದ್ದರಾಮಯ್ಯ ಅವರು ಕೃಷ್ಣೇಗೌಡ ಪರವಿದ್ದರೆ, ಡಿ.ಕೆ. ಶಿವಕುಮಾರ್ ಅವರು ಶ್ರೀಧರ ಗೌಡ ಪರ ಬ್ಯಾಟಿಂಗ ಮಾಡುತ್ತಿದ್ದಾರೆ. ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ರಾಯಚೂರು, ಲಿಂಗಸೂಗೂರು, ಮಂಗಳೂರು ನಗರ ಉತ್ತರದಲ್ಲಿ ತಲಾ ಇಬ್ಬರು ಆಕಾಂಕ್ಷಿಗಳಿದ್ದಾರೆ. ಇದರಿಂದ ಆಯ್ಕೆ ಕಗ್ಗಂಟಾಗಿದೆ. ಇನ್ನುಕೆ.ಆರ್. ಪುರ ಉಪಚುನಾವಣೆಯಲ್ಲಿ ಬಿ.ಎ. ಬಸವರಾಜ (ಬೈರತಿ) ವಿರುದ್ಧ ಸೋಲನುಭವಿಸಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎ. ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಉದಯ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಗೋಪಾಲ್ ಆಕಾಂಕ್ಷಿಯಾಗಿದ್ದಾರೆ. ಶೆಟ್ಟರ್ ನಡೆ ನಿಗೂಢ; “ಕೈ’ ಕಾದುನೋಡುವ ತಂತ್ರ
ಸತತವಾಗಿ ಗೆಲುವು ಸಾಧಿಸುತ್ತ ಬಂದಿರುವ ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಇನ್ನೂ ಟಿಕೆಟ್ ಖಾತ್ರಿಪಡಿಸಿಲ್ಲ. ಅವರ ನಡೆ ನಿಗೂಢವಾಗಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಕಾದುನೋಡುತ್ತಿದೆ. ಇಲ್ಲಿ 2018ರಲ್ಲಿ ಡಾ.ಮಹೇಶ ನಲವಾಡ ಪ್ರತಿಸ್ಪರ್ಧಿ ಆಗಿದ್ದರು. ಈ ಬಾರಿಯೂ ಅವರು ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಘೋಷಣೆಯಾಗದ ಕ್ಷೇತ್ರಗಳು
ರಾಯಚೂರು, ಲಿಂಗಸೂಗೂರು, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್, ಹುಬ್ಬಳ್ಳಿ- ಧಾರವಾಡ ಪಶ್ಚಿಮ, ಶಿಗ್ಗಾವಿ, ಹರಿಹರ, ಚಿಕ್ಕಮಗಳೂರು, ಶಿಡ್ಲಘಟ್ಟ, ಮುಳಬಾಗಿಲು, ಕೆ.ಆರ್. ಪುರ, ಪುಲಕೇಶಿನಗರ, ಸಿ.ವಿ. ರಾಮನ್ ನಗರ, ಶ್ರವಣಬೆಳಗೊಳ, ಅರಕಲಗೂಡು, ಮಂಗಳೂರು ನಗರ ಉತ್ತರ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳು
ಪುಲಕೇಶಿನಗರ, ಲಿಂಗಸೂಗೂರು, ಹರಿಹರ, ಶಿಡ್ಲಘಟ್ಟ.