ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಿರಿಯ ರಾಜಕಾರಣಿ ಬಿ.ಎಲ್.ದೇವರಾಜು ಮೂರನೇ ಬಾರಿಯೂ ಸೋಲು ಕಂಡಿದ್ದು, ಕೊನೇ ಚುನಾವಣೆಯಲ್ಲೂ ಕೆ.ಆರ್.ಪೇಟೆ ಮತದಾರ ಕೈಬಿಟ್ಟಿದ್ದಾನೆ.
1999ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಜಾತ್ಯತೀತ ಜನತಾದಳದಿಂದ ಸ್ಪರ್ಧೆ ಮಾಡುತ್ತಾರೆ. ಆಗ ಜನತಾದಳದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ದೇವೇಗೌಡರ ಮಾನಸ ಪುತ್ರ ಎಂದೇ ಗುರುತಿಸಿಕೊಂಡಿದ್ದ ಬಿ.ಪ್ರಕಾಶ್ ಸ್ಪರ್ಧೆಯಿಂದ 16881 ಮತಗಳ ಅಂತರದಿಂದ ಪರಾಭವಗೊಳ್ಳುತ್ತಾರೆ. ಅದಾದ ಬಳಿಕ ಮತ್ತೆ ಎಲ್ಲ ಚುನಾವಣೆಯಲ್ಲೂ ಟಿಕೆಟ್‌ಗೆ ಪೈಪೋಟಿ ನಡೆಸುತ್ತಲೇ ಬಂದಿದ್ದಾರೆ.
ಅದೃಷ್ಟ ಕೈಹಿಡಿಯಲಿಲ್ಲ: 2018ರ ಚುನಾವಣೆ ಯಲ್ಲಿ ಜೆಡಿಎಸ್ ನಾಯಕರು ಸೃಷ್ಟಿಸಿದ ಗೊಂದಲ ದಿಂದಾಗಿ ಟಿಕೆಟ್ ಕೈತಪ್ಪುತ್ತದೆ. ಮೊದಲು ಕೆ.ಸಿ.ನಾರಾ ಯಣಗೌಡಗೆ ಟಿಕೆಟ್ ನೀಡುವ ದಳಪತಿಗಳು, ಹಿಂದೆಯೇ ಬಿ.ಎಲ್. ದೇವರಾಜುಗೂ ಕೂಡ ಬಿ ಫಾರಂ ನೀಡುತ್ತಾರೆ. ಇದರಿಂದ ಗೊಂದಲ ಉಂಟಾಗಿ ಕೊನೆಗೆ ಕೆ.ಸಿ. ನಾರಾಯಣಗೌಡಗೆ ಟಿಕೆಟ್ ಖಾತ್ರಿಯಾಗುತ್ತದೆ. ಇದರಿಂದ ಗೆಲ್ಲುವ ಸಂದರ್ಭದಲ್ಲಿ ಟಿಕೆಟ್ ಕೈತಪ್ಪುತ್ತದೆ. ಅಲ್ಲಿಯೂ ಅದೃಷ್ಟ ಕೈಹಿಡಿಯಲಿಲ್ಲ. ನಂತರ 2019ರಲ್ಲಿ ಜೆಡಿಎಸ್ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಎರಡನೇ ಬಾರಿಗೆ ಕೆ.ಆರ್.ಪೇಟೆಗೆ ಉಪಚುನಾವಣೆ ಎದುರಾಗುತ್ತದೆ. ಆಗ ಜೆಡಿಎಸ್‌ನಿಂದ ಬಿ.ಎಲ್.ದೇವರಾಜು ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತದೆ. ಆದರೆ, ಚುನಾವಣೆ ಪ್ರಚಾರಕ್ಕೆ ದಳಪತಿಗಳು ಕ್ಷೇತ್ರಕ್ಕೆ ಕಾಲಿಡುವುದಿಲ್ಲ. ಇದರಿಂದ ಹಿನ್ನೆಡೆ ಅನುಭವಿಸುವ ದೇವರಾಜು ಬಿಜೆಪಿ ಅಲೆಯಲ್ಲೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಎರಡನೇ ಸೋಲು ಅನುಭವಿಸುತ್ತಾರೆ.
ಕಾಂಗ್ರೆಸ್‌ನಲ್ಲಿನ ಭಿನ್ನಮತ ಶಮನ: ಇದೀಗ ಪ್ರಸ್ತುತ ನಡೆದ ಚುನಾವಣೆಯಲ್ಲೂ ಮೂರನೇ ಸೋಲು ಅನುಭವಿಸುತ್ತಾರೆ. ಇದು ನನ್ನ ಕೊನೇ ಚುನಾವಣೆಯಾಗಿರುವುದರಿಂದ ಈ ಬಾರಿ ನನಗೆ ಟಿಕೆಟ್ ನೀಡಿ ಎಂದು ದಳಪತಿಗಳ ಮುಂದೆ ಅಂಗಲಾಚುತ್ತಾರೆ. ಆದರೆ, ಟಿಕೆಟ್ ನಿರಾಕರಿಸುವ ದಳಪತಿಗಳು ಎಚ್.ಟಿ.ಮಂಜುಗೆ ಟಿಕೆಟ್ ಘೋಷಿಸುತ್ತಾರೆ. ಇದರಿಂದ ರೊಚ್ಚಿಗೆದ್ದ ಬಿ.ಎಲ್ .ದೇವರಾಜು ಪ್ರತ್ಯೇಕ ಬಂಡಾಯ ಸಭೆಗಳನ್ನು ಮಾಡಿ ಹೈಕಮಾಂಡ್‌ಗೆ ಸಂದೇಶ ರವಾನೆ ಮಾಡುತ್ತಾರೆ. ಅಲ್ಲದೆ, ಬಂಡಾಯ ನಿಲ್ಲುವ ಮುನ್ಸೂಚನೆಯನ್ನು ನೀಡುತ್ತಾರೆ. ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ. ಆದರೆ, ಜೆಡಿಎಸ್ ನಲ್ಲಿದ್ದಾಗ ಬೆಂಬಲ ನೀಡುವ ನಾಯಕರು ಯಾರೂ ಇವರ ಜೊತೆ ಬರುವುದಿಲ್ಲ. ಕೆಲವರು ಪಕ್ಷದಲ್ಲಿಯೇ ಉಳಿದರೆ, ಇನ್ನೂ ಕೆಲವರು ಬಿಜೆಪಿ ಸೇರ್ಪಡೆಯಾಗುತ್ತಾರೆ. ಕಾಂಗ್ರೆಸ್‌ನಲ್ಲಿನ ಭಿನ್ನಮತವನ್ನು ಶಮನಗೊಳಿಸುವ ಮೂಲಕ ಗೆಲುವಿನ ಹಾದಿ ಸುಗಮವಾದರೂ ಕೆ.ಆರ್.ಪೇಟೆ ಜನ ಮಾತ್ರ ಮೂರನೇ ಬಾರಿಯೂ ಹಿಡಿಯಲಿಲ್ಲ.
ಮತ ಭಿಕ್ಷೆ ನೀಡದ ಮತದಾರ: ಈ ಬಾರಿಯ ಚುನಾವಣೆಯಲ್ಲಿ ಬಿ.ಎಲ್ .ದೇವರಾಜು ಇದೇ ನನ್ನ ಕೊನೇ ಚುನಾವಣೆ. ಆದ್ದರಿಂದ ಕ್ಷೇತ್ರದ ಜನ ಕೈಬಿಡಬೇಡಿ. ಜೆಡಿಎಸ್ ನಿಂದ ಅನ್ಯಾಯವಾಗಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಮತದಾರರ ಮುಂದೆ ಕೈಮುಗಿದರು. ಇತ್ತ ಪತ್ನಿಯೂ ಸಹ ಚುನಾವಣೆ ಸಮಾವೇಶವೊಂದರಲ್ಲಿ ಸೆರಗೊಡ್ಡಿ ನನ್ನ ಪತಿಯ ಕೈಬಿಡಬೇಡಿ ಮತ ಭಿಕ್ಷೆ ನೀಡಿ ಎಂದು ಅಂಗಲಾಚಿದರು. ಆದರೆ, ಮತದಾರನ ಮನಸ್ಸು ಮಾತ್ರ ಕರಗಲಿಲ್ಲ. ಈ ಬಾರಿ ಜೆಡಿಎಸ್ ಟಿಕೆಟ್ ನೀಡಿದ್ದರೆ, ಕೊನೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದರು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ