Advertisement

Congress; ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸವಾಲು

11:59 PM Oct 19, 2024 | Team Udayavani |

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಇಬ್ಬರಿಗೂ ಸವಾಲು ಆಗಿದ್ದು, ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಹಂತದ ಕಸರತ್ತು ನಡೆದಿದೆ.

Advertisement

ಮೂರೂ ಕ್ಷೇತ್ರಗಳನ್ನು ದಕ್ಕಿಸಿಕೊಳ್ಳುವ ಮೂಲಕ ವಿಧಾನಸಭೆ ಯಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಪಾಳೆಯ ಇದೆ. ಸಾರ್ವತ್ರಿಕ ಚುನಾವಣೆಯಲ್ಲಿ 135 ಸ್ಥಾನ ಗಳಿಸಿದ್ದ ಕಾಂಗ್ರೆಸ್‌, ಸಂಡೂರು ಶಾಸಕ ತುಕಾರಾಂ ರಾಜೀನಾಮೆಯಿಂದ 134ಕ್ಕೆ ಇಳಿದಿದ್ದು, ಇದರೊಂದಿಗೆ ಬಿಜೆಪಿ ಗೆದ್ದಿದ್ದ ಶಿಗ್ಗಾವಿ ಹಾಗೂ ಜೆಡಿಎಸ್‌ ಗೆದ್ದಿದ್ದ ಚನ್ನಪಟ್ಟಣದಲ್ಲೂ ಕಾಂಗ್ರೆಸ್‌ ಗೆದ್ದರೆ 138 ಸ್ಥಾನ ಗಳಿಸುವ ಮೂಲಕ ಸರಕಾರವನ್ನು ಇನ್ನಷ್ಟು ಸುಭದ್ರಗೊಳಿಸಿಕೊಳ್ಳಲು ತಂತ್ರ ರೂಪಿಸಿದೆ.

ಈಗಾಗಲೇ ಮೂರೂ ಕ್ಷೇತ್ರ
ಗಳಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿರುವ ಕಾಂಗ್ರೆಸ್‌, ಆಕಾಂಕ್ಷಿಗಳಿಂದ ಅರ್ಜಿಯನ್ನೂ ಸ್ವೀಕರಿಸಿದೆ. ಮೂರು ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಯಾವ ಮೂವರು ಹಿತವರು ಎಂಬುದನ್ನು ನಿರ್ಧರಿಸಬೇಕಿದೆ. ಕೆಲ ಕ್ಷೇತ್ರದಲ್ಲಿ ಅರ್ಜಿಯನ್ನೇ ಹಾಕದ ಅಚ್ಚರಿಯ ಅಭ್ಯರ್ಥಿಯನ್ನೂ ಕೊನೇ ಕ್ಷಣದಲ್ಲಿ ಕಣಕ್ಕಿಳಿಸುವ ಸಂಭವವೂ ಇದೆ.

ಇಂದು, ನಾಳೆ ದಿಲ್ಲಿಯಲ್ಲಿ ಸಭೆ
ಸ್ಥಳೀಯವಾಗಿ ಪಡೆದುಕೊಂಡಿರುವ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದು, ಅ. 20 ಮತ್ತು 21ರಂದು ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಚುನಾವಣ ಸಮಿತಿ ಸಭೆಯಲ್ಲಿ ಶಿವಕುಮಾರ್‌ ಕೂಡ ಭಾಗಿಯಾಗಲಿದ್ದಾರೆ.

ಅ. 24ರ ವರೆಗೆ ಕಾದು ನೋಡುವ ತಂತ್ರ
ಈಗಾಗಲೇ ಶಿಗ್ಗಾವಿಯಿಂದ ಭರತ್‌ ಬೊಮ್ಮಾಯಿ ಹಾಗೂ ಸಂಡೂರಿನಿಂದ ಬಂಗಾರು ಹನುಮಂತು ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ನಡುವೆ ಹಗ್ಗ-ಜಗ್ಗಾಟ ನಡೆದಿದೆ. ಹೀಗಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿರುವ ಕಾಂಗ್ರೆಸ್‌, ನಾಮಪತ್ರ ಸಲ್ಲಿಕೆ ಕೊನೆಯ ದಿನ ಅ. 25ರ ಮುನ್ನಾ ದಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿ ಬಹಿರಂಗಗೊಳಿಸುವ ಸಾಧ್ಯತೆಗಳಿವೆ.

Advertisement

ಅಖಾಡದ ಸ್ಪಷ್ಟ ಚಿತ್ರಣ
ಬಿಜೆಪಿ ಅಭ್ಯರ್ಥಿಗಳ ಘೋಷಣೆಯಿಂದ ಸ್ಪಷ್ಟ ಚಿತ್ರಣ ಸಿಕ್ಕಂತಾಗಿದೆ. ಕಾಂಗ್ರೆಸ್‌ ಪಟ್ಟಿಯಲ್ಲಿದ್ದ ಸೋಮಣ್ಣ ಬೇವಿನಮರದ, ಆರ್‌.ಶಂಕರ್‌, ಮಾಜಿ ಸಚಿವ ವಿನಯ್‌ ಕುಲಕರ್ಣಿ ಪತ್ನಿ ಶಿವಲೀಲಾ, ಸೇರಿದಂತೆ ಹತ್ತಾರು ಆಕಾಂಕ್ಷಿಗಳಲ್ಲಿ ಯಾರನ್ನು ಸ್ಪರ್ಧೆಗಿಳಿಸಿದರೆ ಲಾಭ ಎನ್ನುವ ಲೆಕ್ಕಾಚಾರದಡಿ ಪಟ್ಟಿಯಲ್ಲಿನ ಹೆಸರುಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ.

ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್‌ ಬಗ್ಗೆ ಒಲವು
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರು ಕೇಳಿಬಂದಿದೆ. ಇದಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಶನಿವಾರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಲು ಸಭೆ ಕರೆದಿದ್ದರು.

ಯಾರೇ ನಿಲ್ಲಲಿ ನಾನೇ ಅಭ್ಯರ್ಥಿ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯಕರ್ತರ ಜತೆಗೂ ಸಭೆ ಮಾಡಿದ್ದೇನೆ. ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದೇನೆ. ಅವರವರ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಯಾರೇ ನಿಲ್ಲಲಿ ನಾನೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next