ಬೆಂಗಳೂರು: ಕೋವಿಡ್ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಿಮ್ಮ ಕಷ್ಟಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಸ್ಪಂದಿಸಿದ್ದಾರೆ. ಈಗ ಆ ಋಣ ತೀರಿಸುವ ಕಾಲ ಬಂದಿದೆ. ಆ ಮೂಲಕ ಅಧಿಕಾರದ ಗದ್ದುಗೆ ಏರಲು “ಕೈ’ ಬಲಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗೋವಿಂದರಾಜನಗರದ ವಿವಿಧ ಬಡಾವಣೆಗಳು, ಪ್ರಮುಖ ರಸ್ತೆಗಳಲ್ಲಿ ಭಾನುವಾರ ಪ್ರಿಯಕೃಷ್ಣ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, “ಶಾಸಕರಾಗಿಲ್ಲದಿದ್ದರೂ ಪ್ರಿಯಕೃಷ್ಣ ಕ್ಷೇತ್ರದ ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದ್ದಾರೆ. ಈಗ ಆ ಋಣ ತೀರಿಸುವ ಅವಕಾಶ ನಿಮ್ಮ (ಜನರ) ಮುಂದಿದೆ ಎಂದು ಹೇಳಿದರು.
ಎಲ್ಲ ಕಡೆ ಈಗ ಕಾಂಗ್ರೆಸ್ ಅಲೆ ಇದೆ. ಸಮೀಕ್ಷೆಗಳು, ಜನರ ನಾಡಿಮಿಡಿತಗಳೆಲ್ಲ “ಕೈ’ ಪರ ಇದೆ. ಯಾರಾದರೂ ಒಬ್ಬರು ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿದ್ದಾರಾ? ಇಲ್ಲ. ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರೇನೂ ದಡ್ಡರೇ? ಎಂದು ಪ್ರಶ್ನಿಸಿದರು.
ಗೋವಿಂದರಾಜನಗರದಲ್ಲೂ ಪ್ರಿಯಕೃಷ್ಣ ಪರ ಅಲೆ ಇದೆ ಎಂದು ತಿಳಿಸಿದರು. ಪ್ರ
ಮುಖ ಬಡಾವಣೆಗಳಲ್ಲಿ ಡಿ.ಕೆ. ಶಿವಕುಮಾರ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ ಮತ್ತಿತರ ಮುಖಂಡರು ರೋಡ್ ಶೋ ನಡೆಸಿದರು. ಬಿಸಿಲಿನ ಧಗೆ, ವಾರಾಂತ್ಯದ ರಜೆ ನಡುವೆಯೂ ನೂರಾರು ಜನ ಸಮಾವೇಶಗೊಂಡು ಪ್ರಿಯಕೃಷ್ಣ ಪರ ಘೋಷಣೆ ಕೂಗಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ, ಕ್ಷೇತ್ರದ ಉದ್ಯಾನಗಳು, ಮೈದಾನಗಳು, ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮತಯಾಚಿಸಿದರು.