Advertisement

29ಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

08:03 PM Mar 24, 2021 | Team Udayavani |

ಸಿಂಧನೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡರು ಮಾ.29ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಇತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಸ್ಕಿ ಉಪಚುನಾವಣೆ ಕಾಂಗ್ರೆಸ್‌ ಉಸ್ತುವಾರಿ ಆರ್‌.ಧ್ರುವನಾರಾಯಣ ಹೇಳಿದರು.

Advertisement

ನಗರದ ಕಾಕತೀಯ ಕ್ಲಬ್‌ನಲ್ಲಿ ವಾಸ್ತವ್ಯ ಹೂಡಿರುವ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಸ್ಕಿಗೆ ಈಗಾಗಲೇ ನಾನು ಎರಡು ಬಾರಿ ಭೇಟಿ ನೀಡಿದ್ದು, ಉತ್ತಮ ವಾತಾವರಣ ಇದೆ. ಆರ್‌. ಬಸನಗೌಡರು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲೇ ಇದ್ದವರು. ಈಗ ಮರಳಿ ಗೂಡಿಗೆ ಬಂದಿದ್ದು, ಅವರ ಬಗ್ಗೆ ಕ್ಷೇತ್ರದಲ್ಲಿ ಸಹಾನುಭೂತಿಯಿದೆ. ಅವರ ತಂದೆ ಕೂಡ ಕಾಂಗ್ರೆಸ್‌ನಲ್ಲಿ ಇದ್ದವರು.

ಜನರೇ ಕ್ಷೇತ್ರದಲ್ಲಿ ದೇಣಿಗೆ ನೀಡಿ, ಕಾಂಗ್ರೆಸ್‌ ಅಭ್ಯರ್ಥಿಗೆ ಹುರಿದುಂಬಿಸುತ್ತಿದ್ದು, ಪಕ್ಷದ ಗೆಲುವು ನಿಶ್ಚಿತವಾಗಿದೆ ಎಂದರು. ಗ್ರಾಪಂವಾರು ಜವಾಬ್ದಾರಿ: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗ್ರಾಪಂವಾರು ಜವಾಬ್ದಾರಿ ನೀಡಲಾಗಿದೆ. ಮಾಜಿ ಸಚಿವರಾದ ಎಚ್‌.ಆಂಜನೇಯ, ಶಿವರಾಜ್‌ ತಂಗಡಗಿ, ಬಸವರಾಜ್‌ ರಾಯರೆಡ್ಡಿ, ಆರ್‌.ಬಿ.ತಿಮ್ಮಾಪುರ ಸೇರಿದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ.

ಜಿಲ್ಲೆಯ ಹಿರಿಯ ನಾಯಕರಾದ ಹಂಪನಗೌಡ ಬಾದರ್ಲಿ, ಎನ್‌.ಎಸ್‌.ಬೋಸರಾಜ್‌, ಅಮರೇಗೌಡ ಬಯ್ನಾಪುರ ಸೇರಿದಂತೆ ಹಲವರು ಒಗ್ಗಟ್ಟಿನಿಂದ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಬಿಜೆಪಿಯಲ್ಲಿ ಇರಬಹುದು. ಮುಖ್ಯಮಂತ್ರಿ ವಿರುದ್ಧವೇ ಬಸನಗೌಡ ಪಾಟೀಲ್‌, ಎಚ್‌.ವಿಶ್ವನಾಥ ಅವರು ಬಹಿರಂಗವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ಅಂತಹ ವಾತಾವರಣ ನಮ್ಮಲ್ಲಿ ಇಲ್ಲ ಎಂದರು.

ನಾಮಪತ್ರ ಸಲ್ಲಿಕೆಗೆ ಮೂಹೂರ್ತ: ಮಸ್ಕಿಯಲ್ಲಿ ಮಾ.29ರಂದು ನಾಮಪತ್ರ ಸಲ್ಲಿಕೆಗೆ ಪಕ್ಷದ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಎಸ್‌.ಆರ್‌ .ಪಾಟೀಲ್‌ ಅವರು ಉಪಸ್ಥಿತರಿರುವರು. ಮಾ.30ರಂದು ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆ ನಡೆಯಲಿದೆ. ಕೇಂದ್ರ, ರಾಜ್ಯ ಸರಕಾರದಿಂದ ಭ್ರಮನಿರಶನವಾಗಿದ್ದು, ಜನ ಕಾಂಗ್ರೆಸ್‌ ಪರ ತೀರ್ಪು ನೀಡುವರು. ಹುಣಸೂರಿನಲ್ಲಿ ಎಚ್‌.ವಿಶ್ವನಾಥರನ್ನು ಮಣಿಸಿ, ಕಾಂಗ್ರೆಸ್‌ ಗೆಲ್ಲಿಸಲಾಯಿತು.

Advertisement

ಅದೇ ಫಲಿತಾಂಶವನ್ನು ನಾವು ಮಸ್ಕಿಯಲ್ಲಿ ಪಡೆಯಲಿದ್ದೇವೆ ಎಂದರು. ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ಉಪಾಧ್ಯಕ್ಷ ಮುರ್ತುಜಾ ಹುಸೇನ್‌, ನಗರಸಭೆ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ಎಚ್‌.ಭಾಷಾ, ಮುನೀರ್‌ ಪಾಷಾ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲಿಕ್‌, ಪ್ರಧಾನ ಕಾರ್ಯದರ್ಶಿ ವೈ.ಅನಿಲ್‌ಕುಮಾರ್‌, ಮುಖಂಡರಾದ ಛತ್ರಪ್ಪ, ಪ್ರಭುರಾಜ್‌ ಕಪೂìರಮಠ, ಸುರೇಶ್‌ ಜಾಧವ್‌, ಭೀಮಣ್ಣ ಬೆಳಗುರ್ಕಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next