ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮಂಗಳವಾರ ರಾತ್ರಿ ಹೊಸಮುಖದ ಅಭ್ಯರ್ಥಿಯನ್ನು ಘೋಷಿಸಿ ಎಲ್ಲ ಕುತೂಹಲಗಳಿಗೆ ತೆರೆಎಳೆದಿದೆ.
ಹುಬ್ಬಳ್ಳಿ ಮೂಲದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಕಾಂಗ್ರೆಸ್ ಮೊಹಮ್ಮದ್ ಯೂಸೂಫ್ ಸವಣೂರು ಎಂಬವರಿಗೆ ಟಿಕೆಟ್ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಬಹುದು ಎಂಬುದು ಕ್ಷೇತ್ರದಲ್ಲಿ ಮಾತ್ರವಲ್ಲ. ಇಡೀ ರಾಜಕೀಯ ವಲಯದಲ್ಲಿಯೇ ಕುತೂಹಲ ಮೂಡಿಸಿತ್ತು.
ಕಾಂಗ್ರೆಸ್‌ನ ಸಾಂಪ್ರದಾಯಿಕ ಅಲ್ಪಸಂಖ್ಯಾತ ಕ್ಷೇತ್ರ ಎನಿಸಿದ ಶಿಗ್ಗಾವಿಯಲ್ಲಿ ಈ ಬಾರಿ ಪಕ್ಷ ಲಿಂಗಾಯತ ಸಮುದಾಯದವರಿಗೆ ಮಣೆ ಹಾಕಬಹುದು ಎಂಬ ಬಗ್ಗೆ ಕ್ಷೇತ್ರದಲ್ಲಿ ಭಾರಿ ಚರ್ಚೆ ನಡೆದಿತ್ತು. ಆದರೆ, ಕಾಂಗ್ರೆಸ್ ಈ ಬಾರಿಯೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡುವ ಮೂಲಕ ತನ್ನ ಸಂಪ್ರದಾಯ ಮುಂದುವರಿಸಿದಂತಾಗಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ ಅಜ್ಜಂಫೀರ್ ಖಾದ್ರಿ, ಸೋಮಣ್ಣ ಬೇವಿನಮರದ, ಶಶಿಧರ ಯಲಿಗಾರ, ರಾಜೇಶ್ವರಿ ಪಾಟೀಲ, ಸಂಜೀವಕುಮಾರ ನೀರಲಗಿ, ಷಣ್ಮುಖ ಶಿವಳ್ಳಿ, ಯೂಸೂಫಖಾನ್ ಪಠಾಣ ಇತರರು ಪೈಪೋಟಿ ನಡೆಸಿದ್ದರು. ಖಾದ್ರಿಗೆ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ಮೊದಲೇ ತಿಳಿಸಿತ್ತು. ಬಳಿಕ ವಿನಯ ಕುಲಕರ್ಣಿ ಕರೆತರಲು ಪ್ರಯತ್ನ ನಡೆಸಿತ್ತು. ಈಗ ಮೊಹಮ್ಮದ್ ಸವಣೂರಗೆ ಟಿಕೆಟ್ ನೀಡಲಾಗಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಕ್ಕೆ ಅದೇ ಕೋಮಿಗೆ ಸೇರಿದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈಗ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಸವಣೂರಗೆ ಎಷ್ಟರ ಮಟ್ಟಿಗೆ ಸಹಕಾರ ನೀಡಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಕಳೆದ ಮೂರು ಚುನಾವಣೆಯಲ್ಲಿ ಖಾದ್ರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಸಲ ಬಸವರಾಜ ಬೊಮ್ಮಾಯಿ ಅವರಿಗೆ ಹೊಸ ಎದುರಾಳಿಯೊಂದಿಗೆ ಸೆಣಸಬೇಕಿದೆ.
ಇದನ್ನೂ ಓದಿ: Beijing ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 21 ಮಂದಿ ಮೃತ್ಯು, ಹಲವರು ಗಂಭೀರ