ಬೆಂಗಳೂರು: ಯಾರಿಗೆ ಟಿಕೆಟ್ ಸಿಗಲಿದೆ, ಇಲ್ಲ… ಇಂಥ ಒಂದು ಕುತೂಹಲ ಹಾಗೂ ಆತಂಕ ರಾಜ್ಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಉಂಟಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಶುಕ್ರವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಎದೆಯಲ್ಲಿ ಢವ..ಢವ.. ಸದ್ದು ತುಸು ಹೆಚ್ಚೇ ಕೇಳಲಾರಂಭಿಸಿದೆ.
ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಹಿತ ಎಲ್ಲ ನಾಯಕರು ದಿಲ್ಲಿ ತಲುಪಿದ್ದು, ಆಕಾಂಕ್ಷಿಗಳು ಸಹ ಅಲ್ಲೇ ಬೀಡು ಬಿಟ್ಟಿದ್ದಾರೆ.
120 ಕ್ಷೇತ್ರಗಳಿಗೆ ಒಂದೊಂದೇ ಹೆಸರು ಅಂತಿಮ ಗೊಂಡಿದ್ದು, ಕೇಂದ್ರ ಚುನಾವಣ ಸಮಿತಿ ಸಭೆಯ ಮುದ್ರೆಯಷ್ಟೇ ಬಾಕಿಯಿದೆ. ಉಳಿದಂತೆ ಎರಡು ಹಾಗೂ ಮೂವರು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಅಳೆದೂ ತೂಗಿ ಗೆಲ್ಲುವ ಸಾಮರ್ಥ್ಯ, ಸಮುದಾಯದ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.
ದಲಿತ ಸಮುದಾಯದ ಎಡಗೈ, ಮುಸ್ಲಿಂ ಹಾಗೂ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಬೇಡಿಕೆ ಇದ್ದು ಅಭ್ಯರ್ಥಿಗಳ ಆಯ್ಕೆ ತಲೆನೋವಾಗುವ ಸಾಧ್ಯತೆಯಿದೆ. 7 ಕ್ಷೇತ್ರ ಹೊರತುಪಡಿಸಿ ಉಳಿದಂತೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಪಡಿಸಲಾಗಿದೆ. ಟಿಕೆಟ್ ನೀಡಲು ವಯಸ್ಸಿನ ಮಾನದಂಡ ಇಲ್ಲದೆ ಇರುವುದರಿಂದ ಶಾಮನೂರು ಶಿವಶಂಕರಪ್ಪ ಅವರಿಗೂ ಟಿಕೆಟ್ ನೀಡುವ ಸಾಧ್ಯತೆ ಗಳಿವೆ. ಒಂದು ವೇಳೆ ಶಾಮನೂರು ಸ್ಪರ್ಧಿಸದಿದ್ದರೆ ಪುತ್ರ ಮಲ್ಲಿಕಾರ್ಜುನ ಅವರ ಪತ್ನಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
Related Articles
30 ಕ್ಷೇತ್ರಗಳಲ್ಲಿ ಮಾಜಿಗಳು?
30 ಕ್ಷೇತ್ರಗಳಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ದೊರೆಯಲಿದೆ ಎನ್ನಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಹುತೇಕ ಕೋಲಾರದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ವಿ.ಎಸ್. ಪಾಟೀಲ್‌ಗೆ ಯಲ್ಲಾಪುರ, ಯು.ಬಿ. ಬಣಕಾರ್‌ಗೆ ರಾಣೆಬೆನ್ನೂರು, ಮುಳ ಬಾಗಿಲು ಶಾಸಕ ನಾಗೇಶ್‌ಗೆ ಮಹದೇವ ಪುರ, ದಿ| ಧ್ರುವನಾರಾಯಣ ಪುತ್ರ ದರ್ಶನ್‌ಗೆ ನಂಜನ ಗೂಡು ಕ್ಷೇತ್ರದಿಂದ ಟಿಕೆಟ್ ದೊರೆಯಲಿದೆ.
ರಾಮನಗರದಲ್ಲಿ ಡಿ.ಕೆ. ಸುರೇಶ್, ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್ ಹಾಗೂ ಅರಕಲಗೂಡಿನ ಎ.ಟಿ. ರಾಮಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಹಾಗೂ ಪುಟ್ಟಣ್ಣ ಅವರನ್ನು ರಾಜಾಜಿನಗರದಿಂದ ಕಣಕ್ಕಿಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮತ್ತೂಂದು ಮೂಲಗಳ ಪ್ರಕಾರ ಶುಕ್ರವಾರ ಸಭೆ ನಡೆದರೂ ಮಾ. 20ರ ಅನಂತರವಷ್ಟೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಹಾಲಿಗಳಿಗಿಲ್ಲಿ ಸಂಶಯ
- ಎಂ.ವೈ. ಪಾಟೀಲ್- ಅಫjಲಪುರ
- ವೆಂಕಟರಮಣಪ್ಪ- ಪಾವಗಡ
- ಕನೀಜ್ ಫಾತೀಮಾ- ಕಲಬುರಗಿ ಉತ್ತರ
- ಕುಸುಮಾ ಶಿವಳ್ಳಿ- ಕುಂದಗೋಳ
- ವಿ. ಮುನಿಯಪ್ಪ- ಶಿಡ್ಲಘಟ್ಟ
- ಡಿ.ಎಸ್. ಹೊಲಗೇರಿ- ಲಿಂಗಸಗೂರು
- ತನ್ವೀರ್ ಸೇಠ್- ನರಸಿಂಹರಾಜ
- ಎಸ್. ರಾಮಪ್ಪ- ಹರಿಹರ