Advertisement

ಜನವರಿ ಮೊದಲ ವಾರ ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ: ಧ್ರುವನಾರಾಯಣ

11:52 PM Dec 20, 2022 | Team Udayavani |

ಉಡುಪಿ: ಜನವರಿ ಮೊದಲ ವಾರದಲ್ಲಿ ಮೊದಲ ಹಂತದ ಕಾಂಗ್ರೆಸ್‌ ಅಭ್ಯಾರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಉಡುಪಿ ಜಿಲ್ಲಾ ಉಸ್ತುವಾರಿ ಆರ್‌. ಧ್ರುವನಾರಾಯಣ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 7 ಸಹಿತ ಜಿಲ್ಲೆಯಲ್ಲಿ 18 ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದ ಚುನಾವಣ ಸಮಿತಿ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಈಗಾಗಲೇ ಅರ್ಜಿ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಕರ್ತರಲ್ಲಿ ಹುರುಪು ಮೂಡಿಸಲು, ಚುನಾವಣೆ ತಯಾರಿ ನೆಲೆಯಲ್ಲಿ ಜ. 9ರಿಂದ ರಾಜ್ಯದ್ಯಂತ ಜಿಲ್ಲಾಮಟ್ಟದ ಪ್ರವಾಸ ಕೈಗೊಳ್ಳಲಾಗಿದೆ. ಅನಂತರ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ರಾಜ್ಯಮಟ್ಟದ ನಾಯಕರು ಎರಡು ಗುಂಪುಗಳಲ್ಲಿ ಪ್ರವಾಸ ಕೈಗೊಂಡು ಸಂಘಟನಾತ್ಮಕವಾಗಿ ಚುನಾವಣೆ ತಯಾರಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಸರಕಾರ ಭ್ರಷ್ಟಾಚಾರದ ಕೂಪ
ಪಿಎಸ್‌ಐ ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ, ಕಮಿಷನ್‌ ದಂಧೆಯಿಂದ ಬಿಜೆಪಿ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಲಕ್ಷಾಂತರ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆಯುವ ಕೆಲಸವನ್ನು ಬಿಜೆಪಿ ಮಾಡಿದೆ. ಭ್ರಷ್ಟಾಚಾರ, ಜನ ವಿರೋಧಿ ನೀತಿಯಿಂದಾಗಿ ಮತದಾರರನ್ನು ಎದುರಿಸಲು ಸಾಧ್ಯವಾಗದೆ ಹಿಂಬಾಗಿಲಿನ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ ಬಿಜೆಪಿಯದ್ದು ಎಂದು ಕಿಡಿಕಾರಿದರು.

ಪಕ್ಷದ ನಾಯಕರು ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ಕಠಿನ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಬಗ್ಗೆ ನಿಗಾವಹಿಸಲು ಪಕ್ಷದ ವತಿಯಿಂದ ಮತಗಟ್ಟೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬೈಂದೂರು ಗೋಪಾಲ ಪೂಜಾರಿ, ಕಾಪು ವಿನಯ ಕುಮಾರ್‌ ಸೊರಕೆ, ಉಡುಪಿ-ಕುಂದಾಪುರ ಮಂಜುನಾಥ ಭಂಡಾರಿ, ಕಾರ್ಕಳ ಮಮತಾ ಗಟ್ಟಿ ಅವರನ್ನು ನೇಮಿಸಲಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಾಯಕರು, ಕಾರ್ಯಕರ್ತರು ಮತದಾರರ ಪಟ್ಟಿ ಬಗ್ಗೆ ನಿಗಾ ವಹಿಸುತ್ತಾರೆ ಎಂದರು.

ಎಐ ಸಿ ಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ರೋಜಿ ಎಂ. ಜಾನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕಾಂಗ್ರೆಸ್‌ ಮುಖಂಡರಾದ ಅಣ್ಣಯ್ಯ ಶೇರಿಗಾರ್‌, ಭಾಸ್ಕರ್‌ರಾವ್‌ ಕಿದಿಯೂರು, ಹಬೀಬ್‌ ಅಲಿ, ಪ್ರಖ್ಯಾತ್‌ ಶೆಟ್ಟಿ, ಹರೀಶ್‌ ಶೆಟ್ಟಿ ಪಾಂಗಾಳ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next