ಚಾಮರಾಜನಗರ: ನನ್ನ ಜತೆಯಲ್ಲೇ ಇದ್ದವರು ನನ್ನ ಕತ್ತು ಕೊಯ್ದರು. ನನ್ನ ಸೋಲಿಗೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಕಾರಣರಲ್ಲ. ನಮ್ಮ ಪಕ್ಷದೊಳಗೆ ಇದ್ದವರೇ ಕಾರಣ ಎಂದು ಮಾಜಿ ಸಚಿವ, ಚಾಮರಾಜ ನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣವಿಡೀ ಹೆಸರು ಪ್ರಸ್ತಾಪ ಮಾಡದೇ ಪಕ್ಷದ ಕೆಲವು ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ನಾನು ಇಲ್ಲಿ ಗೂಟ ಹೊಡೆದುಕೊಂಡಿರೋದಕ್ಕೆ ಬಂದಿರಲಿಲ್ಲ. ಸೋಮಣ್ಣ ಆದ ಮೇಲೆ ಅವರ ಮಗ ಬರ್ತಾನೆ ಎಂದು ಸ್ಕೀಂ ಮಾಡಿದಿರಿ. ಆದರೆ ನಾನು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಆಸೆ ಹೊತ್ತು ಬಂದಿದ್ದೆ. 50 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡುವ ಉದ್ದೇಶ ಹೊಂದಿದ್ದೆ. ನನ್ನ ಹೆಜ್ಜೆ ಗುರುತು ಮಾಡಿಸಲು ಬಂದಿದ್ದೆ. ನಿಮ್ಮ ಮನೆ ಹಾಳಾಗ, ನೀವೆಲ್ಲ ಸೇರಿಕೊಂಡು ಮಾಡಬಾರದ್ದು ಮಾಡಿಬಿಟ್ರಿ. ಎಂಟು ಹತ್ತು ಜನ ಮಾಡಿರುವ ಪಾಪದ ಕೆಲಸ ಇದು ಎಂದು ಕಿಡಿ ಕಾರಿದರು.
ನನ್ನೊಬ್ಬನಿಗಾಗಿ ಇಡೀ ಜಿಲ್ಲೆಯನ್ನು ಹಾಳು ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ಕಣ್ಣೀರು ಹಾಕಿದ್ದಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದು ಸೋಲಿಸಿದ್ದೀರಿ. ಯಾರ್ಯಾರು ಅಂತ ನನಗೆ ಗೊತ್ತಿದೆ. ವರುಣಾ ದಲ್ಲಿ ನಾನು ಒಂದು ದಿನವೂ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ನಂತರ ಎಷ್ಟು ದಿನ ಬಂದ್ರು? ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆದುಕೊಂಡು ಬಂದರು. ಅದು ಸೋಮಣ್ಣನ ಬಲ. ನನ್ನನ್ನು ಸೋಲಿಸಲು ಎಲ್ಲೆಲ್ಲಿ ಮೀಟಿಂಗ್ ಆಯ್ತು ಅಂತ ನನಗೆ ಗೊತ್ತಿದೆ. ಇದೆಲ್ಲ ಕೃಪಾಪೋಷಿತ ನಾಟಕ ಮಂಡಳಿಯ ಕೆಲಸ ಎಂದು ಯಾರ ಹೆಸರೂ ಹೇಳದೇ ಕಿಡಿಕಾರಿದರು.
ಈಗ ಕಾರ್ಯಕರ್ತರು ಕೆಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದೀರಿ. ಇದೇ ಕೆಲಸ ಮೊದಲೇ ಮಾಡಿದ್ದರೆ, ಚೆನ್ನಾಗಿತ್ತು. ಈ ಕುತಂತ್ರ, ಮನೆ ಹಾಳ ಬುದ್ದಿ, ಯಾರು ಹೆಂಗೆಂಗೆ ನಾಟಕ ಆಡಿದರು. ಹಾಗೆ ಮಾಡಿದವರೆಲ್ಲ ನನ್ನ ಜತೆನೇ ಇದ್ದರು. ಹೀಗಿರುವಾಗ ನೀವೆಲ್ಲ ಏನು ಮಾಡೋಕಾಗುತ್ತೆ? ಎಂದು ಕಾರ್ಯಕರ್ತರತ್ತ ನೋಡಿ ಹೇಳಿದರು.
Related Articles
ನನ್ನ ಜತೆ ಇದ್ದವರು ನನ್ನನ್ನು ಸೋಲಿಸಿದಿರಿ. ಇದರಿಂದ ನಿಮಗೆ ಬಂದ ಕಿರೀಟ ಏನು? ನೆನೆಸಿಕೊಂಡರೆ ಹೊಟ್ಟೆ ಒಳಗೆ ಬೆಂಕಿ ಬೀಳುತ್ತದೆ. 24*7 ನಗರವನ್ನು ಬೆಳವಣಿಗೆ ಮಾಡಬೇಕೆಂಬ ಕನಸು ಕಂಡಿದ್ದೆ. ಅನಿರೀಕ್ಷಿತವಾಗಿ ಬಂದವನನ್ನು ಸೋಲಿಸಿದರಲ್ಲ. ನೀವು ಮನುಷ್ಯರಾ? ಎಂದು ಸೋಮಣ್ಣ ತಮ್ಮ ಆಕ್ರೋಶ ಹೊರಹಾಕಿದರು.
ಯಾರು ಪಕ್ಷಕ್ಕೆ ದ್ರೋಹ ಮಾಡ್ತಾರೋ ಅಂಥವರನ್ನು ಜೋಡು ತೆಗೆದುಕೊಂಡು ಹೊಡೆದು ಓಡಿಸ್ರಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್ ಅವರಿಗೆ ಮಾಜಿ ಸಚಿವ ವಿ. ಸೋಮಣ್ಣ ಆಗ್ರಹ ಮಾಡಿದರು.
ನನ್ನನ್ನು ಸೋಲಿಸಲು ಕುತಂತ್ರ ಮಾಡಿದ್ದಾರೆ. ಅಂಥವರು ಯಾರ್ಯಾರು ಅಂತ ನಿಮಗೇ ಗೊತ್ತಿದೆ. ಇವತ್ತಿಂದ ನಿಮ್ಮ ಪೆನ್ನು ಪೇಪರ್ ಮೂಲಕ ಎಚ್ಚರಿಕೆ ನೀಡಿ, ಪಕ್ಷದಿಂದ ಹೊರ ಹಾಕಿ. ರಾಷ್ಟ್ರೀಯ ಅಧ್ಯಕ್ಷರಿಗೂ ಹೇಳುತ್ತೇನೆ. ನನ್ನ ಸಮಾಜದವರೇ ನನ್ನ ಸೋಲಿಗೆ ಕಾರಣ. ಇದಕ್ಕೆ ಡೈರೆಕ್ಷನ್ ಎಲ್ಲಿಂದ ಬಂತು? ಅಲ್ಲಿಂದಲೇ. ಬಹಿರಂಗ ಸಭೆ ದಿನ 10 ನಿಮಿಷವೂ ಮಾತಾಡಲಿಲ್ಲ. ಆ ಸಭೆಯಲ್ಲಿ 15-20 ಸಾವಿರ ಜನರು ಸೇರಿದ್ದರು ಎಂದು ಪಕ್ಷದ ನಾಯಕರೊಬ್ಬರು ನಗರಕ್ಕೆ ಆಗಮಿಸಿ ಬಹಿರಂಗ ಪ್ರಚಾರ ಸಭೆಯಲ್ಲಿ 10 ನಿಮಿಷವೂ ಮಾತಾಡದೇ ಹೋದ ಕುರಿತು ಹೇಳಿದರು.
ಅವನ್ಯಾರೋ ಇಲ್ಲೇ ಮನೆ ಮಾಡ್ತಾನೆ. ಅವರ ಎಂಜಲು ಕಾಸಿಗೆ ಕೆಲವರು ನಿಂತಿದ್ದಾರೆ. ಅವನು ನಗರಕ್ಕೆ ಬಂದು ಮಠಗಳಿಗೆ ಹಣ ಕೊಟ್ಟು ಮತ್ತೆ ವಾಪಸ್ ಈಸ್ಕೊಂಡಿದಾನೆ. ಅಂಥವನ ಜೊತೆ ಹೋಗುವ ಜನ ಎಂಥವರಿರಬೇಕು? ಎಂದು ಪರೋಕ್ಷವಾಗಿ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್ ಅವರ ವಿರುದ್ಧ ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಮುಖಂಡರಾದ ಕೆ. ಆರ್. ಮಲ್ಲಿಕಾರ್ಜುನಪ್ಪ, ಹನುಮಂತಶೆಟ್ಟಿ, ಎಸ್. ಮಹದೇವಯ್ಯ, ಕೋಟೆ ಶಿವಣ್ಣ, ಎಂ. ರಾಮಚಂದ್ರ, ಆರ್. ಸುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.