Advertisement

ಕಾಂಗ್ರೆಸ್‌ನವರು ರಾಹುಲ್‌ ಗಾಂಧಿಯನ್ನು ಒಪ್ಪಿಸಲಿ

08:38 AM Dec 28, 2017 | |

ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಮುಖಂಡತ್ವ ವಹಿಸಿರುವ ವೀರೇಶ್‌ ಸೊಬರದ ಮಠ “ಉದಯವಾಣಿ’ ಜೊತೆಗೆ ವಿವರವಾಗಿ ಮಾತನಾಡಿದ್ದಾರೆ.

Advertisement

ಬಿಜೆಪಿ ಕಚೆರಿ ಎದುರು ಪ್ರತಿಭಟನೆ ಮಾಡಿರುವ ಉದ್ದೇಶ ಏನು ?
ನೋಡ್ರಿ, ಮೊದಲು ಜಗದೀಶ್‌ ಶೆಟ್ಟರ್‌ ಮನೆ ಮುಂದೆ ಧರಣಿ ಕುಳಿತೆವು. ಆಗ ಅವರು ಮನೆಗೇ ಬರಲಿಲ್ಲ. ಯಡಿಯೂರಪ್ಪ ಪ್ರತಿಭಟನಾ ಸ್ಥಳಕ್ಕೆ ಬಂದು 20 ದಿನದಲ್ಲಿ ನಿಮಗೆ ಗೋವಾ ಸರ್ಕಾರ ನೀರು ಬಿಡುವ ಆದೇಶದ ಪತ್ರ ತಂದು ಕೊಡುತ್ತೇನೆ. ಮಾತು ಕೊಟ್ಟಂತೆ ನಡೆದುಕೊಳ್ಳದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಭರವಸೆ ನೀಡಿದರು. ಆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ನಿಮ್ಮ ಕಚೇರಿ ಎದುರಲ್ಲೇ ಪ್ರತಿಭಟನೆ ನಡೆಸಿ ವಿಷ ಕುಡಿಯುತ್ತೇವೆ ಎಂದು ಹೇಳಿದ್ದೆವು. ಅದರಂತೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೇವೆ.

ಮಾತುಕತೆಯಿಂದ ಈ ವಿವಾದ ಬಗೆಹರಿಯುವ ಭರವಸೆ ಇದೆಯಾ ?
ಸತ್ಯವಾಗಿಯೂ ಬಗೆ ಹರಿಯುವ ಭರವಸೆ ಇದೆ. ಮಹದಾಯಿ ನ್ಯಾಯಮಂಡಳಿಯೇ ಈ ವಿಷಯದಲ್ಲಿ ಮೂರು ರಾಜ್ಯಗಳು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬಹುದು ಎಂದು ಹೇಳಿದೆ.

ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಪ್ರಾಮಾಣಿಕ ಪ್ರಯತ್ನ ಮಾಡಿದೆ ಅನಿಸುತ್ತಾ ?
ನೋಡ್ರಿ, ರಾಜ್ಯ ಸರ್ಕಾರ ಇನ್ನೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಾಂಗ್ರೆಸ್‌ ನಾಯಕರು, ಮಹದಾಯಿ ವಿಷಯದಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕುಡಿಯುವ ನೀರಿನ ವಿಷಯದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ
ಎಂದು ರಾಹುಲ್‌ ಗಾಂಧಿಯಿಂದ ಹೇಳಿಕೆ ಕೊಡಿಸಲಿ. ನಂತರ ಗೋವಾ ಕಾಂಗ್ರೆಸ್‌ ಪಕ್ಷ ಹೇಗೆ ವಿರೋಧ ಮಾಡುತ್ತದೋ ನೋಡೋಣ. ಕಾಂಗ್ರೆಸ್‌ ಹೈ ಕಮಾಂಡ್‌ ಪಾತ್ರವೂ ಇಲ್ಲಿ ಮುಖ್ಯವಾಗಿದೆ.

ಕಾಂಗ್ರೆಸ್‌ ಕಚೇರಿ ಮುಂದೆ ಯಾಕೆ ಧರಣಿ ನಡೆಸಲಿಲ್ಲ ?
ನಾವು ಇವತ್ತು ತೆಗೆದುಕೊಳ್ಳುವ ನಿರ್ಣಯ ಬಹಳ ಆಶಾದಾಯಕವಾಗಿದೆ. ಮೂರು ಪಕ್ಷಗಳು ನಮ್ಮನ್ನು ನಿರ್ಲಕ್ಷ ಮಾಡಿವೆ ಎನ್ನುವುದನ್ನು ಎತ್ತಿ ತೋರಿಸುವ ನಿರ್ಣಯ ಕೈಗೊಳ್ಳುತ್ತೇವೆ. ಕಾಂಗ್ರೆಸ್‌ನವರಿಗೂ ಸಮಯ ಇದೆ. ಅವರೂ ಕೆಲಸ ಮಾಡದಿದ್ದರೆ ಅವರ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ.

Advertisement

ನಿಮ್ಮ ಹೋರಾಟ ಕಾಂಗ್ರೆಸ್‌ ಪ್ರಾಯೋಜಿತ ಅಂತ ಆರೋಪ ಇದೆಯಲ್ಲಾ ?
 ಒಂದು ಪಕ್ಷಕ್ಕೆ ಡೀಲ್‌ ಆಗೋದಾಗಿದ್ದರೆ, ನಮ್ಮ ಹೋರಾಟ ಇಷ್ಟು ದಿನಾ ನಡೀತಿರಲಿಲ್ಲ. ಸಿದ್ದರಾಮಯ್ಯ ನನಗೆ ಟಿಕೆಟ್‌ ಕೊಡುವ ಭರವಸೆ ನೀಡಿಲ್ಲ. ನನಗೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ.

ಗೋವಾ ಸರ್ಕಾರ ಕುಡಿಯೋದಕ್ಕೆ ಮಾತ್ರ ನೀರು ಎಂದು ಹೇಳುತ್ತಿದೆ ?
ಒಂದು ಮಾತು ನಾನು ಸ್ಪಷ್ಟವಾಗಿ ಹೇಳ್ತೀನಿ, ಪರ್ರಿಕರ್‌ ನಮಗೇನು ಭಿಕ್ಷೆ ಕೊಡ್ತಿದಾರಾ? ಈ ರಾಜ್ಯದ ಮುಖ್ಯಮಂತ್ರಿಗೆ, ವಿರೋಧ ಪಕ್ಷಕ್ಕೆ ಇದು ಯಾಕೆ ತಿಳಿಯುತ್ತಿಲ್ಲ? ಇಬ್ಬರೇ ಎಂಪಿಗಳನ್ನಿಟ್ಟುಕೊಂಡು ಅವರು ಅಷ್ಟೊಂದು ಆಟ ಆಡುತ್ತಿದ್ದಾರೆ. ನಮ್ಮಲ್ಲಿ ಇಷ್ಟೊಂದು ಎಂಪಿಗಳಿದ್ದಾರೆ. ಇವರಲ್ಲಿ ಒಗ್ಗಟ್ಟಿಲ್ಲದಿರೋದ್ರಿಂದ ಅವರು ನಾಟಕ ಮಾಡುತ್ತಿದ್ದಾರೆ. ನೀರು ಕೊಡುವುದಿಲ್ಲ ಅಂದರೆ ಸಂಸತ್‌ನ ಕಲಾಪ ಬಹಿಷ್ಕರಿಸುವುದಾಗಿ ಹೇಳಬೇಕು. ಇಲ್ಲಿ ರಾಜ್ಯದ ಹಿತ ಕಾಪಾಡುವ ಕೆಲಸ ನಡೆಯುತ್ತಿಲ್ಲ. ಎಲ್ಲರಿಂದಲೂ ಪರ್ರಿಕರ್‌ ಹಿತ ಕಾಯುವ ಕೆಲಸ ನಡೆಯುತ್ತಿದೆ.

ಗೋವಾದಲ್ಲಿ ಕಾಂಗ್ರೆಸ್‌ ಪಕ್ಷ ವಿರೋಧ ಮಾಡ್ತಿದೆ. ಅವರನ್ನು ರಾಜ್ಯ ಕಾಂಗ್ರೆಸ್‌ ಒಪ್ಪಿಸಬಹುದಲ್ಲಾ ?
ಎಂ.ಬಿ. ಪಾಟೀಲರು ಬಂದು ನಮ್ಮ ಸರ್ಕಾರ ಪತ್ರ ಬರೆದಿದೆ ಎಂದು ಹೇಳಲು ಬಂದಿದ್ದರು. ಪತ್ರ ಬರೆಯುವುದು ನಿಮ್ಮ ಕರ್ತವ್ಯ. ಅದೇನು ದೊಡ್ಡ ಸಾಧನೆಯಲ್ಲ. ಅದನ್ನು ಬಿಟ್ಟು ರಾಹುಲ್‌ ಗಾಂಧಿ ಮೂಲಕ ಗೋವಾ ಕಾಂಗ್ರೆಸ್‌ನವರನ್ನು ಒಪ್ಪಿಸಿ ಎಂದು ಹೇಳಿ ಕಳುಹಿಸಿದ್ದೇನೆ.

ಚುನಾವಣೆಗೂ ಮುಂಚೆ ವಿವಾದ ಬಗೆ ಹರಿಯದಿದ್ದರೆ ಚುನಾವಣೆ ಬಹಿಷ್ಕರಿಸುತ್ತೀರಾ ?
ಚುನಾವಣೆ ಬಹಿಷ್ಕಾರ ಹಾಕುವುದಕ್ಕಿಂತಲೂ ಟ್ರಿಬ್ಯುನಲ್‌ ಆದೇಶ ಬರುವ ಮೊದಲೇ ವಿವಾದ ಬಗೆ ಹರಿಯಬೇಕು. ಇಲ್ಲದಿದ್ದರೇ ಮೂರು ರಾಜಕೀಯ ಪಕ್ಷಗಳಿಗೆ ಕಾಲವೇ ಉತ್ತರ ಹೇಳುತ್ತದೆ. 15 ದಿನಗಳಲ್ಲಿ ಪ್ರಧಾನಿಯೇ ಮಧ್ಯಸ್ಥಿಕೆ ವಹಿಸುವಂತಹ ಹೋರಾಟ ಮಾಡುತ್ತೇವೆ.

ರಾಜಕೀಯ ಪಕ್ಷಗಳು ನಿಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿವೆಯೇ ?
ಮೂರು ರಾಜಕೀಯ ಪಕ್ಷಗಳು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಹೋರಾಟಗಾರರು ಯಾವುದೇ ರೀತಿ ದಾರಿ ತಪ್ಪದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹದಾಯಿ ಹೋರಾಟದ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಿದ್ದರೂ, ಅವರು ರಾಜಕೀಯ ಮಾಡುವ ಪರಿಸ್ಥಿತಿ ಇಲ್ಲ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next