Advertisement

ಉಲ್ಟಾ ಹೊಡೆದ ಕಾಂಗ್ರೆಸ್‌ ಲೆಕ್ಕಾಚಾರ

02:49 PM May 25, 2019 | pallavi |

ಕೊಪ್ಪಳ: ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರವೀಗ ಕೇಸರಿಮಯವಾಗಿದೆ. ಬಿಜೆಪಿಯ ಸಂಗಣ್ಣ ಕರಡಿ ರಾಜಕೀಯ ರಂಗಿನಾಟ ಕೈಗೆ ಸೋಲಿನ ಬಗ್ಗೆ ಲೆಕ್ಕಾಚಾರವೇ ಸಿಗುತ್ತಿಲ್ಲ. ಎಂಟೂ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿಯೂ ಮೋದಿ ಅಲೆಯ ಅಬ್ಬರ ಕೆಲಸ ಮಾಡಿದೆ. ಕರಡಿಗೆ ಸಂಘ ಮತ್ತು ಪರಿವಾರದ ಮತಗಳು ಸಿಕ್ಕಿದ್ದರೆ, ಕೈಗೆ ಅತಿಯಾದ ಗೆಲುವಿನ ವಿಶ್ವಾಸ ಮುಳುವಾಗಿದೆ.

Advertisement

ಚುನಾವಣಾ ಆರಂಭದ ದಿನಗಳಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಘೋಷಣೆ ಮಾಡಲೇ ಇಲ್ಲ. ಇದರಿಂದ ವಿಚಲಿತರಾಗಿದ್ದ ಕರಡಿ ಬಿಎಸ್‌ವೈ ಮನೆಯಲ್ಲೇ ಠಿಕಾಣಿ ಹೂಡಿ ಟಿಕೆಟ್ ಪಡೆದು ಕ್ಷೇತ್ರದಲ್ಲಿ ಟೆಂಪಲ್ ರನ್‌ ನಡೆಸಿಮತಬೇಟೆ ನಡೆಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಸ್ವಜಾತಿ ಪ್ರೇಮ ಮೆರೆದ ಮಾಜಿ ಸಿಎಂ ಸಿದ್ದರಾಮಯ್ಯ ಹಿಟ್ನಾಳ ಕುಟುಂಬದ ಪರ ಒಲವು ತೋರಿ ರಾಜಶೇಖರ ಹಿಟ್ನಾಳಗೆ ಟಿಕೆಟ್ ಕೊಡಿಸಿದ್ದರು. ಇದರಿಂದ ಟಿಕೆಟ್ ಆಕಾಂಕ್ಷಿತರಾಗಿದ್ದ ಕೆ. ವಿರೂಪಾಕ್ಷಪ್ಪ, ಬಸವನಗೌಡ ಬಾದರ್ಲಿ ಮುನಿಸಿಕೊಂಡು ಆಂತರಿಕ ಜಾತಿ ವ್ಯವಸ್ಥೆ ವಿರುದ್ಧ ಗುಡುಗಿದ್ದರು. ಇದು ಕೈ ಸೋಲಿಗೆ ಮುಳವಾಗಿದೆ ಎನ್ನುವ ಲೆಕ್ಕಾಚಾರ ಕೇಳಿ ಬಂದಿವೆ.

ಮೂರೇ ಕ್ಷೇತ್ರಕ್ಕೆ ಕಾಂಗ್ರೆಸ್‌ ಒತ್ತು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿದ್ದ ಬಸವರಾಜ ಹಿಟ್ನಾಳ ಅವರು ಸಿಂಧನೂರು, ಸಿರಗುಪ್ಪಾ, ಮಸ್ಕಿ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ನಡೆಸಿರಲಿಲ್ಲ. ಆ ಕ್ಷೇತ್ರಗಳಲ್ಲಿಯೇ ಹಿಟ್ನಾಳಗೆ ಲೀಡ್‌ ಕಡಿಮೆಯಾಗಿ ಸೋಲಿಗೆ ಕಾರಣವಾಯ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ ಹಿನ್ನಡೆ ಕೊಟ್ಟ ಆ ಮೂರು ಕ್ಷೇತ್ರಗಳಲ್ಲಿಯೇ ಹೆಚ್ಚು ಪ್ರಚಾರ ನಡೆಸಿದ್ದರು. ಉಳಿದ ಕ್ಷೇತ್ರಗಳ ಹೊಣೆಯನ್ನು ಆಯಾ ಶಾಸಕ, ಮಾಜಿ ಶಾಸಕರಿಗೆ ಉಸ್ತುವಾರಿ ಕೊಟ್ಟಿದ್ದರು.

ಜೊತೆಗೆ ಪ್ರಮುಖ ನಾಯಕರಿಗೆ ಮಾತ್ರ ಚುನಾವಣಾ ಜವಾಬ್ದಾರಿ ಕೊಟ್ಟಿದ್ದರಿಂದ 2ನೇ ಹಂತದ ಕೈ ನಾಯಕರಲ್ಲಿ ಆಂತರಿಕ ಮುನಿಸು ಕಾಣಿಸಿಕೊಂಡಿತ್ತು. ಇದು ಕಾಂಗ್ರೆಸ್‌ ಸೋಲಿಗೆ ಮತ್ತಷ್ಟು ಕಾರಣವಾಯಿತು.

ಕೈಗೆ ಅತಿಯಾದ ವಿಶ್ವಾಸ : ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಅತಿ ಯಾದ ಗೆಲುವಿನ ವಿಶ್ವಾಸವೇ ಮುಳುವಾಯಿತು ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ. ಕೊಪ್ಪಳ, ಕುಷ್ಟಗಿ, ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರು. ಹೀಗಾಗಿ ಈ ನಾಲ್ಕು ಕ್ಷೇತ್ರ ತಮಗೆ ಹೆಚ್ಚು ಮತಗಳ ಬರಲಿವೆ. ಕನಕಗಿರಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಕೃಪೆ ಸಿಗಲಿದೆ, ಗಂಗಾವತಿಯಲ್ಲಿ ಅನ್ಸಾರಿ, ದಳದ ಮೈತ್ರಿ ನಮಗೆ ಪ್ಲಸ್‌ ಆಗಲಿದೆ. ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಕೆಲಸ ಮಾಡಲಿದ್ದಾರೆ ಎನ್ನುವ ಅತಿಯಾದ ವಿಶ್ವಾಸ ಹೊಂದಿದ್ದ ಕಾಂಗ್ರೆಸ್‌ ಲೆಕ್ಕಾಚಾರ ಉಲಾr ಹೊಡೆದಿವೆ.

Advertisement

ಕಮಲಕ್ಕೆ ಆಸರೆಯಾದ ಸಂಘ-ಪರಿವಾರ: ಎಂಟೂ ಕ್ಷೇತ್ರದಲ್ಲಿ ಈ ಬಾರಿ ಕಮಲಕ್ಕೆ ಆರ್‌ಎಸ್‌ಎಸ್‌(ಸಂಘ)- ಲಿಂಗಾಯತ (ಪರಿವಾರ) ಮತಗಳೇ ಆಸರೆಯಾಗಿವೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಚುನಾವಣೆಗೂ ಮೊದಲೇ ಮನೆ ಮನೆ ಪ್ರಚಾರ ಮಾಡಿದ್ದಾರೆ. ಜೊತೆಗೆ ಎಂಟೂ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿವೆ. ಕಮಲಕ್ಕೆ ಫಾರವರ್ಡ ಮತಗಳು ಸಾಮಾನ್ಯವಾಗಿವೆ. ಇಲ್ಲಿ ಕೈಗೆ ಮೈನಸ್‌ ಆಗಿದೆ. ಇದರೊಟ್ಟಿಗೆ ಮೊದಲ ಬಾರಿಗೆ ಅಲ್ಪಸಂಖ್ಯಾತ ಮತಗಳು ಕರಡಿ ಬುಟ್ಟಿಗೆ ಬಿದ್ದಿರುವುದನ್ನು ಅಲ್ಲಗಳೆಯುವಂತಿಲ್ಲ. ಕೊಪ್ಪಳ ಕ್ಷೇತ್ರದಲ್ಲಿಯೇ ಮುಸ್ಲಿಂ ಮತಗಳು ಕರಡಿಗೆ ಬಂದಿದ್ದು, ಇದನ್ನು ಸ್ವತಃ ಅವರೇ ಸಂದರ್ಶದಲ್ಲಿ ಹೇಳಿದ್ದಾರೆ.

ಎಲ್ಲೆಡೆಯೂ ಮೋದಿ ಅಬ್ಬರ: ದೇಶದ ತುಂಬೆಲ್ಲ ಯುವಕರಲ್ಲಿ ಮೋದಿಯ ಮಾತು ಜೋರಾಗಿತ್ತು. ಕೊಪ್ಪಳ ಕ್ಷೇತ್ರವೂ ಅದಕ್ಕೆ ಹೊರತಾಗಿರಲಿಲ್ಲ. ಮೋದಿ ಅವರ ದೂರದೃಷ್ಟಿ, ವಿದೇಶಾಂಗ ನೀತಿಗೆ ಯುವ ಸಮೂಹ ಮಾರು ಹೋಗಿದ್ದು, ಬಿಜೆಪಿಗೆ ಜೈ ಎಂದಿದ್ದು, ಮೋದಿ ಅಲೆಯಲ್ಲೇ ಕರಡಿ ಗೆದ್ದು ಬೀಗಿದ್ದರು. ಈಗಲೂ ಮೋದಿ ಗಂಗಾವತಿ ಕ್ಷೇತ್ರಕ್ಕೊಮ್ಮೆ ಬಂದು ಪ್ರಚಾರ ನಡೆಸಿದ ಬಳಿಕವಂತೂ ಕ್ಷೇತ್ರದ ತುಂಬೆಲ್ಲಾ ಮೋದಿ ಎನ್ನುವ ಮಾತು ಕೇಳಿಬಂದಿತ್ತು. ಎಂಟೂ ಕ್ಷೇತ್ರಗಳಲ್ಲಿ ಯುವಕರು ದೇಶ, ರಕ್ಷಣೆ, ಭದ್ರತೆ, ಪುಲ್ವಾಮ ದಾಳಿ, ಪ್ರತಿ ದಾಳಿಯ ಬಗ್ಗೆ ಪ್ರೇರೇಪಿತರಾಗಿ ಕಮಲಕ್ಕೆ ಜೈ ಎಂದಿದ್ದಾರೆ.

ಕೈ ಕೊಟ್ಟ ಅಲ್ಪಸಂಖ್ಯಾತ ಮತಗಳು: ಕಾಂಗ್ರೆಸ್‌ಗೆ ಮುಸ್ಲಿಂ ಸೇರಿ ಇತರೆ ದಲಿತ ಮತಗಳು ಬಂದೇ ಬರುತ್ತವೆ ಎಂದು ವಿಶ್ವಾಸ ಹೊಂದಿತ್ತು. ಆದರೆ ಈ ಬಾರಿ ಅಲ್ಪಸಂಖ್ಯಾತ ಮತಗಳೇ ಹೆಚ್ಚಾಗಿ ಕಾಂಗ್ರೆಸ್‌ಗೆ ಕೈ ಕೊಟ್ಟಿವೆ ಎನ್ನುವ ವಿಶ್ಲೇಷಣೆ ಮಾಡಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಕೊಪ್ಪಳ ನಗರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತಗಳಿದ್ದು, ಕಾಂಗ್ರೆಸ್‌ ಬದಲಿಗೆ ಬಿಜೆಪಿಯತ್ತ ವಾಲಿವೆೆ ಎನ್ನುವ ಮಾತು ಕೇಳಿ ಬಂದಿದೆ.

ಒಟ್ಟಿನಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅಭಿವೃದ್ಧಿ, ಮೋದಿ ಅಲೆ, ಯುವಕರ ಆಸರೆಯಿಂದ ಎರಡನೇ ಅವಧಿಗೆ ಲೋಕಸಭೆ ಪ್ರವೇಶಿಸುವಂತಾಗಿದೆ. ಇತ್ತ ಕಾಂಗ್ರೆಸ್‌ ಆಂತರಿಕ ಮುನಿಸು, ಅತಿಯಾದ ಗೆಲುವಿನ ವಿಶ್ವಾಸ, ಅಲ್ಪಸಂಖ್ಯಾತ ಮತಗಳ ಬಗ್ಗೆ ಸ್ವಲ್ಪ ಕಾಳಜಿ ಕಡಿಮೆಯಾಗಿದ್ದು ಸೋಲಿಗೆ ಮುಳುವಾಗಿದೆ ಎನ್ನುವ ಲೆಕ್ಕಾಚಾರದ ಮಾತು ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next