ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಫೆಬ್ರವರಿ 3 ರಿಂದ ಪ್ರತ್ಯೇಕವಾಗಿ ಬಸ್ ಯಾತ್ರೆ ಮಾಡುತ್ತಿರುವುದು ರಾಜ್ಯ ಕಾಂಗ್ರೆಸ್‌ನ ಈ ನಾಯಕರಲ್ಲಿನ ಒಡಕಿನ ಬಿಂಬ ಎಂದು ಬಿಜೆಪಿ ಟ್ವೀಟ್ ಮಾಡಿ ಕುಟುಕಿದೆ.
ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವಕ್ಕೆ ಮುತುವರ್ಜಿ ವಹಿಸಿ ಜನ ಬರುವಂತೆ ನೋಡಿಕೊಂಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಯಾತ್ರೆ ಮಾಡಿದಾಗ ಸಂಚು ಮಾಡಿ ರಾಜ್ಯಾಧ್ಯಕ್ಷರಾಗಿ ಜನ ಸೇರಿಸುವ ಹೊಣೆಗಾರಿಕೆ ತಮ್ಮದು, ನನ್ನದೇನಿದ್ದರೂ ಭಾಷಣ ಮಾತ್ರ ಎಂಬ ಒಪ್ಪಂದ ಮಾಡಿಕೊಂಡರು. ನಮ್ಮದೇ ಜನ ಎಂಬ ಕಾರಣಕ್ಕೆ ಡಿ.ಕೆ.ಸುರೇಶ್ ಅವರು ಭಾಷಣದಲ್ಲಿ ಏನಿರಬೇಕು ಏನಿರಬಾರದು ಎಂದು ನಿರ್ದೇಶನ ಕೊಡಲು ಬಂದಾಗಲೂ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳಲಿಲ್ಲ. ಜನ ಸೇರಿಸುವ ಯಾವ ಜವಾಬ್ದಾರಿಯೂ ತೆಗೆದುಕೊಳ್ಳದೆ ಎಲ್ಲವನ್ನೂ ಡಿಕೆ ಸಹೋದರರ ಹೆಗಲಿಗೆ ಹಾಕಿದ್ದರು ಎಂದು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಅವರಿಗೆ ಅವರಿಗೆ ಸಿದ್ಧಾಂತಗಳೇ ಇಲ್ಲ. ಅವರು ಹೇಳುವ ಸಮಾಜವಾದ ಮತ್ತು ಜಾತ್ಯತೀತದ ಮಾತುಗಳು ಕೇವಲ ಬೂಟಾಟಿಕೆಯವು. ಲಿಂಗಾಯತ ಧರ್ಮವನ್ನು ಒಡೆದು ಆಳಲು ಹೊರಟ ಅವರು, ಬಸವಕಲ್ಯಾಣದಿಂದ ಯಾತ್ರೆ ಆರಂಭಿಸಿರುವುದು ಪರಿಸ್ಥಿತಿಯ ವ್ಯಂಗ್ಯ. ಧರ್ಮ ವಿಭಜಿಸಲು ಹೊರಟ ಸಿದ್ದರಾಮಯ್ಯ ಅವರು ಈಗ ಬಸವಕಲ್ಯಾಣದಿಂದ ಅದೇನು ಸಂದೇಶ ಸಾರಲು ಹೊರಟಿದ್ದಾರೆ? ಪಕ್ಷದಲ್ಲೇ ಅವರ ಮತ್ತು ಡಿ.ಕೆ.ಶಿವಕುಮಾರ್ ಎಂಬ ಎರಡು ಬಣಗಳಿವೆ. ಅದನ್ನು ಸರಿಪಡಿಸಲು ಜಂಟಿ ಬಸ್ ಯಾತ್ರೆ ಆರಂಭಿಸಲಾಗಿತ್ತು. ವಿಭಜನೆಯಾಗುವ ಹಂತಕ್ಕೆ ದೇವರು ಸಿದ್ದರಾಮಯ್ಯರವರನ್ನು ಬಸವಕಲ್ಯಾಣಕ್ಕೆ ತಲುಪಿಸಿದ್ದಾನೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.