ಚನ್ನಗಿರಿ: ರಾಜ್ಯದ ಅಭಿವೃದ್ಧಿ ಕಲ್ಪನೆಯಿಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜಕಾರಣದಲ್ಲಿ ತೊಡಗಿವೆ. ಬಡ ವರ್ಗದ ಜನತೆಗೆ ಅನುಕೂಲವಾಗುವಂತಹ ಯಾವ ಯೋಜನೆಯನ್ನೂ ಸ್ವಯಂ ಪ್ರೇರಿತವಾಗಿ ನೀಡಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಆರೋಪಿಸಿದರು.
ಪಟ್ಟಣದ ಮೌದ್ಗಲ್ ಆಂಜನೇಯ ಸಮುದಾಯ ಭವನದಲ್ಲಿ ನಡೆದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಸ್ತ್ರೀಯರಿಗಾಗಿ ಸಾಕಷ್ಟು ಯೋಜನೆ ಜಾರಿ ತಂದಿದ್ದರು.
ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಸ್ಥಳಿಯ ಚುನಾವಣೆ ಕ್ಷೇತ್ರಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಿದ್ದರಿಂದ ಇವತ್ತು ಜಿಪಂ-ಮತ್ತು ತಾಪಂಗಳಲ್ಲಿ ಹೆಚ್ಚು ಮಹಿಳೆಯರನ್ನು ಕಾಣಲು ಸಾಧ್ಯವಾಗಿದೆ ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ 30 ನಿಮಿಷಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ.
ಈ ವ್ಯಕ್ತಿತ್ವ ಜೆಡಿಎಸ್ ಬಿಜೆಪಿ ಸಮಿಶ್ರ ಸರ್ಕಾರವಿದ್ದಾಗ ಅವರ ಬುದ್ಧಿ ಎಲ್ಲಿ ಹೋಗಿತ್ತು. ಆಗ ರೈತರ ಸಾಲಮನ್ನಾ ಮಾಡೋದಕ್ಕೆ ಮೀನಾಮೇಷ ಏಣಿಸಿದ್ದ ಅವರು, ಈಗ ರೈತರ ಸಾಲಮನ್ನಾ ಮಾಡುವುದರ ಬಗ್ಗೆ ಮಾತನಾಡುತ್ತಿದ್ದಾರೆ. ನಂತರ ಬಂದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ತೀರ್ಮಾನಿಸಿದ್ದಾರೆ ಎಂದರು.
ಮಾಜಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಕಾರ್ಯಕರ್ತರ ಬೆಂಬಲ ಬಹಳ ಮುಖ್ಯವಾಗಿದ್ದು, ಮಹಿಳೆಯರು ಮನಸ್ಸು ಮಾಡಿದರೆ ರಾಜ್ಯದಲ್ಲಿ ಬಿಜೆಪಿಯನ್ನು ತರಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಬೆಂಬಲಿಸಿ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಲು ಬಿಜೆಪಿ ಶ್ರಮಿಸುತ್ತಿದೆ ಎಂದರು.
ಹೈಕೋರ್ಟ್ ವಕೀಲರಾದ ಮಾಲಾ, ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷೆ ಜಯಮ್ಮ, ಸಹಾನಾ ರವಿ, ಸಾಕಮ್ಮ ಗಂಗಾಧರಪ್ಪ, ಕೆ.ಸಿ. ರವಿ, ಪುರಸಭೆ ಅಧ್ಯಕ್ಷ ಸುನಿತಾ ಗಣೇಶ್, ತಾಪಂ ಅಧ್ಯಕ್ಷೆ ಪುಷ್ಪವತಿ, ಉಪಾಧ್ಯಕ್ಷ ಹಾಲೇಶ್‌ನಾಯ್ಕ, ಜಿಪಂ ಸದಸ್ಯೆ ಮಂಜುಳಾ ಟಿ.ವಿ ರಾಜು, ಯಶೋಧಮ್ಮ ಮರುಳಪ್ಪ, ಎಪಿಎಂಸಿ ಸದಸ್ಯ ಎಂ.ಬಿ. ರಾಜಪ್ಪ, ಕೆಪಿಎಂ ಶಿವಲಿಂಗಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದೇಶ್, ಜಿಪಂ ಸದಸ್ಯ ಲೋಕೇಶ್ವರ್, ತಾಪಂ ಸದಸ್ಯೆ ಗಾಯತ್ರಿ ಅಣ್ಣಯ್ಯ, ರೂಪಾ ಶ್ರೀಧರ್, ಸಜಾತಾ ಬಸವರಾಜಪ್ಪ, ನಲ್ಕುದುರೆ ಕವಿತಾ ಮತ್ತಿತರರಿದ್ದರು.