Advertisement

ರಾಜ್ಯಕ್ಕಿಂದು ಭಾರತ್‌ ಜೋಡೋ ಎಂಟ್ರಿ

09:06 PM Sep 29, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ನಿಧಾನವಾಗಿ ಆರಂಭವಾಗಿರುವಂತೆಯೇ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರಂಭಿಸಿರುವ ಭಾರತ್‌ ಜೋಡೋ ಯಾತ್ರೆ  ಶುಕ್ರವಾರ (ಸೆ.30) ರಾಜ್ಯ ಪ್ರವೇಶಿಸಲಿದೆ.

Advertisement

ಕೇರಳದ ಮೂಲಕ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸಲಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ   ಶುಕ್ರವಾರದಿಂದ ರಾಜ್ಯದ ನಾಯಕರು ಹೆಜ್ಜೆ ಹಾಕಲಿದ್ದಾರೆ. ಯಾತ್ರೆ ನಡೆಯಲಿರುವ ಇಪ್ಪತ್ತೂಂದು ದಿನಗಳ ಕಾಲ ಐನೂರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ದಂಡು ಚಾಮರಾಜನಗರದಲ್ಲಿ ಬೀಡುಬಿಟ್ಟಿದ್ದು,  ಭರ್ಜರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆ°ಲೆಯಲ್ಲಿ ಭಾರತ್‌ ಜೋಡೋ ಯಾತ್ರೆ ರಾಜಕೀಯವಾಗಿಯೂ ಕಾಂಗ್ರೆಸ್‌ ಪಾಲಿಗೆ ಮಹತ್ವವಾಗಿದೆ. ಈ ನಡುವೆ, ಕೆಲವು ರಾಹುಲ್‌ ಗಾಂಧಿ ಸ್ವಾಗತಕ್ಕಾಗಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಕೆಲವು ಕಿಡಿಗೇಡಿಗಳು ವಿರೂಪಗೊಳಿಸಿರುವ ಬಗ್ಗೆ ದೂರು ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ರಾಹುಲ್‌ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ಯಾತ್ರೆಯ ಕುರಿತು ಸಾರ್ವಜನಿಕರಲ್ಲಿ ಅರಿಕೆ ಮಾಡಿಕೊಂಡಿರುವ ಶಿವಕುಮಾರ್‌, “ಇದು ಪಿಕ್ನಿಕ್‌ ಅಲ್ಲ ಎಂಬ ಅರಿವಿರಲಿ. ನಾವೆಲ್ಲರೂ ದಿನಕ್ಕೆ 20 ಕಿಮೀ ನಡೆಯೋಣ’ ಎಂದು ಮನವಿ ಮಾಡಿದ್ದಾರೆ. ಜತೆಗೆ, ಬೇರೆ ಪಕ್ಷದಲ್ಲಿರುವ ಸ್ನೇಹಿತರೂ ಬನ್ನಿ. ಬದಲಾವಣೆಯ ಆರಂಭ ಇಲ್ಲಿಂದಲೇ’ ಎಂದು ಹೇಳಿದ್ದಾರೆ.

ಶಿವಕುಮಾರ್‌ ಜತೆ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ ಸುರ್ಜೆವಾಲಾ ಅವರೂ ಚಾಮರಾಜನಗರಕ್ಕೆ ತೆರಳಿದ್ದಾರೆ. ರಾಜ್ಯದಲ್ಲಿ ಪಾದಯಾತ್ರೆಯ ಉಸ್ತುವಾರಿ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ವಹಿಸಿಕೊಂಡಿದ್ದಾರೆ.

Advertisement

ಈ ಪಾದಯಾತ್ರೆಯ ಮೂಲಕವೇ ರಾಜ್ಯ ವಿಧಾನಸಭಾ ಚುನಾವಣೆಗೆ ಚಾಲನೆ ನೀಡಬೇಕೆಂಬ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ಮತ್ತುಯುವಕರ ತಂಡ ರಚಿಸಿ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಿದ್ಧಗೊಳಿಸಲಾಗಿದೆ.

ರಾಹುಲ್‌ಗಾಂಧಿ ಅವರು ವಿವಿಧ ಸಮುದಾಯ, ಸಂಘಟನೆಗಳು, ಚಿಂತಕರ ಜೊತೆ ಸಂವಾದ ನಡೆಸಲಿದ್ದಾರೆ. ಕೆಪಿಸಿಸಿ ಹಮ್ಮಿಕೊಂಡಿರುವ ಬೃಹತ್‌ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ.30 ಮತ್ತು ಅ.1 ರಂದು ಚಾಮರಾಜನಗರ ಜಿಲ್ಲೆಯಲ್ಲಿ ಸಂಚರಿಸಲಿರುವ ಯಾತ್ರೆ, ಅಕ್ಟೋಬರ್‌  2 ರಂದು ಗಾಂಧಿಜಯಂತಿಯಂದು  ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದತ್ತ ಸಾಗಲಿದೆ. ರಾತ್ರಿ ಮೈಸೂರು ನಗರ ಪ್ರವೇಶಿಸಲಿದೆ. ಅಕ್ಟೋಬರ್‌ ಮೂರರಂದು ಮೈಸೂರು ನಗರದಿಂದ ಹೊರಡಲಿರುವ ಪಾದಯಾತ್ರೆ ಶ್ರೀರಂಗಪಟ್ಟಣ ತಲುಪಲಿದೆ. ಅಕ್ಟೋಬರ್‌ ನಾಲ್ಕು ಮತ್ತು ಐದ ರಂದು ಪಾದಯಾತ್ರೆಗೆ ವಿರಾಮ ನೀಡಲಾಗಿದ್ದು, ಅಕ್ಟೋಬರ್‌ ಆರರಂದು ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಡಲಿದ್ದು, ಮಂಡ್ಯ ಪ್ರವೇಶಿಸಲಿದೆ.ಮಂಡ್ಯದ ನಂತರ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದ್ದು ಅಕ್ಟೋಬರ್‌ ಇಪ್ತತ್ತರಂದು ಆಂಧ್ರಪ್ರವೇಶವನ್ನು ಪ್ರವೇಶಿಸಲಿದೆ. ಭಾರತ್‌ ಜೋಡೋ ಯಾತ್ರೆಗೆ ಆಯಾ ಜಿಲ್ಲೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಾಥ್‌ ನೀಡಲಿದ್ದು ಯಾತ್ರೆಯ ಯಶಸ್ಸಿಗೆ ಸಕಲ ಸಿದ್ದತೆಗಳನ್ನುಮಾಡಲಾಗಿದೆ ಎಂದು ಕೆಪಿಸಿಸಿ ತಿಳಿಸಿದೆ.

ಇಂದು ಮತ್ತು ನಾಳೆ  :

ಭಾರತ್‌ ಜೋಡೋ ಯಾತ್ರೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯನ್ನು ಪ್ರವೇಶಿಸಲಿದ್ದು ಬೆಂಡಗಳ್ಳಿ ಮತ್ತು ಬೇಗೂರುಗಳಲ್ಲಿ ಸಾಗಲಿದೆ. ಶನಿವಾರ  ಬೇಗೂರಿನಿಂದ ಆರಂಭವಾಗಿರುವ ಪಾದಯಾತ್ರೆ ಕಳÇಗೇಟ್‌ ಮೂಲಕ ಪಾಂಡವಪುರ ಗ್ರಾಮದವರೆಗೆ ನಡೆಯಲಿದೆ.

ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ದೇಶದ  ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ರಾಜ್ಯದಲ್ಲಿ ಯಾತ್ರೆ ಯಶಸ್ವಿಗೊಳಿಸಲು ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ನಮ್ಮ ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಯಾತ್ರೆ ಮುಂದಿನ ರಾಜ್ಯ ಹಾಗೂ ರಾಷ್ಟ್ರ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next