Advertisement

“ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ’

03:14 PM Dec 22, 2017 | Team Udayavani |

ಮುಳಬಾಗಿಲು: 2018ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸುವ ಮೂಲಕ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಮುಳಬಾಗಿಲು ನಗರದಲ್ಲಿ ಗುರುವಾರ “ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಘೋಷಣೆಯಡಿ ಕೆಪಿಸಿಸಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕಾಂಗ್ರೆಸ್‌ ಪಕ್ಷ ಮತ್ತೂಮ್ಮೆ ಅಧಿಕಾರಕ್ಕೆ ಬರಲಿ ಹಾಗೂ ಕಾಂಗ್ರೆಸ್‌ ಪಕ್ಷದ ಎಲ್ಲಾ ವಿಘ್ನಗಳು ದೂರಾಗಲಿ ಎಂದು ಮೊದಲಿಗೆ ತಾಲೂಕಿನ ಕುರುಡುಮಲೆ ಶ್ರೀ ವಿನಾಯಕ ಮತ್ತು ಮುಳಬಾಗಿಲು ಶ್ರೀ ಆಂಜನೇಯಸ್ವಾಮಿ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಲಾಗಿದೆ. ಮಂಕುತಿಮ್ಮನ ಕಗ್ಗ ಎಂದೇ ಖ್ಯಾತಿಯಾದ ಡಿವಿಜಿ ಹಾಗೂ ಎಂ.ವಿ.ಕೃಷ್ಣಪ್ಪ ಮತ್ತು ಎಂ.ವಿ.ವೆಂಕಟಪ್ಪ ಅವರಂ ತಹ ಮಹಾನ್‌ ನಾಯಕರನ್ನು ಸಮಾಜಕ್ಕೆ ನೀಡಿದ ಕೀರ್ತಿ ಮುಳಬಾಗಿಲಿಗೆ ಸಲ್ಲುತ್ತದೆ ಎಂದು ಶ್ಲಾ ಸಿದರು. 

2018ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ತಾವೆಲ್ಲರೂ ಸೇರಿ ಸಿದ್ಧತೆ ನಡೆಸಿದ್ದೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಸ್ಪರ್ಧಿಸಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಪೂರಕವಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ 163 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಅಂಶವನ್ನು ಜನಸಮೂಹಕ್ಕೆ ತಲುಪಿಸಲು ಕಾಂಗ್ರೆಸ್‌ ಪಕ್ಷದಿಂದ ಪ್ರವಾಸ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಎಲ್ಲಾ ಭರವಸೆ ಈಡೇರಿಸಿದ್ದೇವೆ: 1999 ರಲ್ಲಿ ಎಸ್‌.ಎಂ.ಕೃಷ್ಣ ಅವರು ಇದೇ ಮುಳಬಾಗಿಲು ಕ್ಷೇತ್ರದ ಕುರುಡುಮಲೆ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ “ಪಾಂಚಜನ್ಯ’ ಯಾತ್ರೆ ಆರಂಭಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಅದೇ ರೀತಿ, 2013ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ, ನಿಮ್ಮ ಆಶೀರ್ವಾದಕ್ಕಾಗಿ ಬಂದಿದ್ದೇವೆ ಎಂದರು.

ಪ್ರಧಾನಿ ವಿರುದ್ಧ ವಾಗ್ಧಾಳಿ: ರಾಜ್ಯದಲ್ಲಿ ಸತತವಾಗಿ 4 ವರ್ಷ ಬರಗಾಲ ಇತ್ತು. ರೈತರು ಬೆಳೆದ ಬೆಳೆ ಕೈಗೆ ಸಿಗದೆ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಹಾವೇರಿಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರು ಸಾಂತ್ವನ ಹೇಳಿ, ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ತಿಳಿಸಿದ್ದರು. ಅದರಂತೆ, 5 ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರ ರೈತರ ಪರವಾಗಿದೆ. ಆದರೆ, ರಾಜ್ಯದಲ್ಲಿ ಹಲವಾರು ಜನ ರೈತರು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಮಂತ್ರಿ ಮೋದಿ ಅವರು ಭೇಟಿ ನೀಡಲಿಲ್ಲ. ರೈತರಿಗೆ ಪರಿಹಾರ ಧನ ಬಿಡುಗಡೆ ಮಾಡುವಂತೆ ಸಿಎಂ ಸಿದ್ಧರಾಮಯ್ಯನವರು ಒಳಗೊಂಡ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಒಂದೇ ಒಂದು ನಯಾ ಪೈಸೆಯೂ ಬರಲಿಲ್ಲ ಎಂದು ದೂರಿದರು. 

Advertisement

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಕೆಪಿಸಿಸಿ ಕಾರ್ಯಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌.ಪಾಟೀಲ್‌, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗಡೆ, ಸಂಸದ ಕೆ.ಎಚ್‌. ಮುನಿಯಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಾಜಮ್ಮ, ಜಲಜಾ ನಾಯಕ್‌, ವಾಣಿ ಸತೀಶ್‌, ಬಾಲರಾಜ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಾರೆಡ್ಡಿ, ಮಾಜಿ ವಿಧಾನ ಪರಿಷತ್‌ ಅಧ್ಯಕ್ಷ ವಿ.ಆರ್‌. ಸುದರ್ಶನ್‌, ಶಾಸಕ ಜಿ.ಮಂಜುನಾಥ್‌, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಆವಣಿ ಬ್ಲಾಕ್‌ ಅಧ್ಯಕ್ಷ ಜಿ.ಆನಂದರೆಡ್ಡಿ, ಶಹಬಾಜ್‌ಖಾನ್‌ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

“ಜೈಲಿಗೆ ಹೋಗಿಬಂದವ ರಿಂದ ಬುದ್ಧಿವಾದ ಬೇಡ’ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಬಿಜೆಪಿಯವರು ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ಜನರ ಆಶೀರ್ವಾದದಿಂದ ಆಡಳಿತಕ್ಕೆ ಬಂದಿದ್ದ ಬಿಜೆಪಿಯವರು ವ್ಯಾಪಕ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿಬಂದರು. ಅಂತಹವರಿಂದ ಬುದ್ಧಿವಾದ ಹೇಳಿಸಿಕೊಳ್ಳುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಪಕ್ಷ ಇಲ್ಲ. ಯಡಿಯೂರಪ್ಪ ಮೊದಲು ಪರಿವರ್ತನೆ ಆಗಲಿ. ಆ ನಂತರ ಬಿಜೆಪಿ ಯಾತ್ರೆ ಮಾಡಲಿ. ಪ್ರಸ್ತುತ ಬಿಜೆಪಿಯದ್ದು ಪಶ್ಚಾತ್ತಾಪದ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ವ್ಯಂಗ್ಯವಾಡಿದರು.

ಅಲ್ಲದೇ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದರು. ಬಡವರ ಹಸಿವನ್ನು ನೀಗಿಸಲು ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದ್ದು, 1.10 ಕೋಟಿ ಕುಟುಂಬಗಳು ಈ ಯೋಜನೆಯ ಫ‌ಲಾನುಭವಿಗಳಾಗಿವೆ. ಈ ಯೋಜನೆಗೆ ಪ್ರತಿ ತಿಂಗಳು 4,650 ಕೋಟಿ ರೂ. ವ್ಯಯ ಮಾಡಲಾಗುತ್ತಿದ್ದು, ಇದೊಂದು ದೇಶದಲ್ಲಿಯೇ ವಿಶೇಷ ಯೋಜನೆಯಾಗಿದೆ. ಅಲ್ಲದೇ, 63 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಲಾಗಿದೆ. 43 ಲಕ್ಷ ಮಕ್ಕಳಿಗೆ ಪ್ರತಿನಿತ್ಯ ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲಾಗುತ್ತಿದೆ. ಇವು ರಾಜ್ಯ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಯೋಜನೆಗಳಾಗಿವೆ.
●ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next