Advertisement

ಕಲಬುರಗಿ ಮೇಯರ್ ಚುನಾವಣೆ: ಬಿಜೆಪಿ ವಿರುದ್ಧ ಹೈಕೋರ್ಟ್‌ಗೆ ಕಾಂಗ್ರೆಸ್ ಮೊರೆ

02:23 PM Nov 16, 2021 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಮತದಾರರ‌ ಪಟ್ಟಿಯಲ್ಲಿ ಬಿಜೆಪಿಯ ಏಳು ಜನ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಯತ್ನದ ವಿರುದ್ಧ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗುತ್ತಿರುವುದು ಕಲಬುರಗಿಯಲ್ಲಿ ಶಾಶ್ವತ ವಸತಿಗೆ ಅಲ್ಲ. ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ನಿಟ್ಟಿನಲ್ಲಿ ಮಾತ್ರ ಅವರ ಹೆಸರು ಸೇರ್ಪಡೆಗೆ ಪ್ರಯತ್ನ ಮಾಡಲಾಗುತ್ತಿದೆ.‌ ಹೀಗಾಗಿ ಮತದಾರರ‌ ಪಟ್ಟಿಯಲ್ಲಿ ಈ ಹೆಸರುಗಳ ಸೇರ್ಪಡೆಗೆ ಅಂಗೀಕಾರ ನೀಡಬಾರದು ಎಂದು ನ್ಯಾಯಲಯದ ಮೊರೆ ಹೋಗಲಾಗಿದೆ ಎಂದು ಹೇಳಿದರು.

7 ಜನ ಸದಸ್ಯರು ಕಲಬುರಗಿಯವರೇ ಅಲ್ಲ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇರದೇ ಇರುವ ಕಾರಣಕ್ಕೆ ಅವರ ಹೆಸರು ಸೇರ್ಪಡೆಗೆ ಪ್ರಯತ್ನಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ 6 ತಿಂಗಳು ಕಾಲ ಇಲ್ಲಿಯೇ ತಾತ್ಕಾಲಿಕ ವಾಸವಿರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಅವಕಾಶ ಇತ್ತು. ಆದರೆ, ಈಗ ನಿಮಯವನ್ನು ತೆಗೆದು ಹಾಕಿ ನಿತ್ಯ ವಿಳಾಸದ ಸ್ಥಳದಲ್ಲೇ ಮಲಗಬೇಕು. ಮುಂದೆಯೂ ಅಲ್ಲಿಯೇ ಶಾಶ್ವತವಾಗಿ ವಾಸಿಸುವರಾಗಬೇಕೆಂಬ ನಿಯಮ ಇದೆ. ಆದ್ದರಿಂದ ಈಗ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರು ಸೇರಲು ಬಯಸುವುದು ದುರುದ್ದೇಶದಿಂದ ಕೂಡಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಪುನೀತ್ ದೆಸೆಯಿಂದಾದರೂ ಹಂಸಲೇಖರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ: ಗಣೇಶ್ ಕಾರ್ಣಿಕ್

Advertisement

ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಅರ್ಜಿಗೆ ಎಂಎಲ್ ಸಿಗಳು ಕೇವಲ ಸಹಿ ಮಾತ್ರ ಮಾಡಿದ್ದಾರೆ. ಅವರು ಸ್ವತಃ ಅರ್ಜಿಯನ್ನು ತುಂಬಿಲ್ಲ. ಅರ್ಜಿ ಜೊತೆಗೆ ಕಲಬುರಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಕರಾರು ಪತ್ರಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರುವ ಪ್ರಯತ್ನ ನಡೆಸಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್‌ ಸಿಂಗ್ ಮಾತನಾಡಿ, ಕಲಬುರಗಿಯಲ್ಲಿ ಮತದಾರ ಪಟ್ಟಿಗೆ ಸೇರ್ಪಡೆ ಮಾಡಲು ಪಯತ್ನಿಸುತ್ತಿರುವ ವಿಧಾನ ಪರಿಷತ್ ಸದಸ್ಯರು ಬೇರೆ-ಬೇರೆ ಜಿಲ್ಲೆಗಳ‌ ಮತದಾರರು ಆಗಿದ್ದಾರೆ. ವಿಧಾನ ಪರಿಷತ್ ಗೆ ಅವರೇ ಸಲ್ಲಿಸಿದ ದಾಖಲೆಗಳಲ್ಲೇ ಅವರ ಖಾಯಂ ವಿಳಾಸ ಇದೆ. ಈಗ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಕಾರಣಕ್ಕೆ ಮತದಾರರ ಪಟ್ಟಿಗೆ ಸೇರಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಿಂದ ಪ್ರಿಯಾಂಕ್ ಖರ್ಗೆ ಕಪ್ಪುಹಣ ಪಡೆದಿದ್ದಾರೆ: ಗಣೇಶ್ ಕಾರ್ಣಿಕ್ ಆರೋಪ

ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ-ಬೆಳಗಾವಿ, ಭಾರತಿ ಶೆಟ್ಟಿ-ಶಿವಮೊಗ್ಗ, ಲೇಹರ್ ಸಿಂಗ್- ಬೆಂಗಳೂರು, ಸಾಯಿಬಣ್ಣ ತಳವಾರ- ಬೆಳಗಾವಿ.. ಹೀಗೆ ಏಳು‌ ಜನರು ಕೂಡ ತಮ್ಮ ವಿಳಾಸದ ಬಗ್ಗೆ ಪರಿಷತ್ ಗೆ ಮಾಹಿತಿ ನೀಡಿದ್ದಾರೆ. ಈಗ ಕಲಬುರಗಿ ವಿಳಾಸ ನೀಡಿ ಕಾನೂನು ಬಾಹಿರವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮುಂದಾಗಿದ್ದಾರೆ. ಈ ಮೂಲಕ ಅಡ್ಡ ದಾರಿಯಿಂದ ಪಾಲಿಕೆ ಅಧಿಕಾರ ಹಿಡಿಯಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next