Advertisement

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

11:42 AM Nov 23, 2024 | Team Udayavani |

ಬಳ್ಳಾರಿ: ಎಸ್.ಟಿ ಮೀಸಲು ಕ್ಷೇತ್ರ ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ (Sandur Assembly Bypoll) ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಸಂಸದ ತುಕರಾಂ ಅವರ ಪತ್ನಿ ಅನ್ನಪೂರ್ಣ ಅವರು ಗೆಲುವಿನ ನಗೆ ಬೀರಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ.

Advertisement

ಸಂಡೂರು ವಿಧಾನಸಭೆ ಎಸ್‌ಟಿ ಮೀಸಲು ಕ್ಷೇತ್ರಕ್ಕೆ ನ.13ರಂದು ಮತದಾನ ನಡೆದಿದ್ದು, ಹಕ್ಕು ಚಲಾಯಿಸಿರುವ ಕ್ಷೇತ್ರದ ಮತದಾರರು, ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಪಡಿಸಿದ್ದರು. ಚುನಾವಣೆ ಅಖಾಡದಲ್ಲಿ ಪಕ್ಷೇತರರು ಸೇರಿ ಆರು ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಡುವೆ ನೇರ ಫೈಟ್‌ ಏರ್ಪಟ್ಟಿತ್ತು.

ಉಭಯ ಪಕ್ಷಗಳ ಹಾಲಿ, ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಂಸದ ಗೋವಿಂದ ಕಾರಜೋಳ, ಆರ್‌. ಅಶೋಕ್‌, ಹಾಲಿ, ಮಾಜಿ ಸಚಿವರಾದ ಸಂತೋಷ್‌ಲಾಡ್‌, ಜಮೀರ್‌ ಅಹ್ಮದ್‌ ಖಾನ್‌, ಬಿ. ನಾಗೇಂದ್ರ, ಬಿ. ಶ್ರೀರಾಮುಲು, ಜಿ. ಜನಾರ್ಧನರೆಡ್ಡಿ ಸೇರಿದಂತೆ ಹಲವಾರು ಪ್ರಬಲ ಮುಖಂಡರು ಕ್ಷೇತ್ರದಲ್ಲಿ ಬೀಡುಬಿಟ್ಟು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವುದು, ಕೈ-ಕಮಲ ಪಕ್ಷಗಳ ನಡುವಿನ ಬಿಗ್‌ ಫೈಟ್‌ಗೆ ಕಾರಣವಾಗಿತ್ತು.

ಉಪ ಚುನಾವಣೆಯಲ್ಲಿ ಕೈ-ಕಮಲ ಪಕ್ಷಗಳ ನಡುವೆ ಬಿಗ್‌ ಫೈಟ್‌ ಏರ್ಪಟ್ಟಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹಾಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಸಂಸದ ತುಕಾರಾಂ ವಹಿಸಿಕೊಂಡಿದ್ದರು. ಪಕ್ಷದ ಮುಖಂಡರಲ್ಲಿ ಭುಗಿಲೆದ್ದಿದ್ದ ಒಂದೇ ಕುಟುಂಬಕ್ಕೆ ಟಿಕೆಟ್‌ ಎಂಬ ಅಸಮಾಧಾನವನ್ನು ಸಚಿವ ಸಂತೋಷ್‌ಲಾಡ್‌ ಶಮನಗೊಳಿಸಿದ್ದರೂ ಬೂದಿಮುಚ್ಚಿದ ಕೆಂಡದಂತಿತ್ತು. ಆದರೆ ಇದು ಮತದಾನದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

Advertisement

ಇನ್ನು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಶಾಸಕ ಜಿ. ಜನಾರ್ಧನರೆಡ್ಡಿಗೆ ವಹಿಸಲಾಗಿತ್ತು. ಇದು ಸಂಡೂರು ಕ್ಷೇತ್ರಕ್ಕೆ ರೆಡ್ಡಿ ಎಂಟ್ರಿ ಕೊಟ್ಟಿರುವುದು ಕೆಲವರಿಗೆ ಹೊಸ ಹುಮ್ಮಸ್ಸು, ಹುರುಪು ನೀಡಿದರೆ, ಇನ್ನು ಕೆಲವರಿಗೆ ಅಸಮಾಧಾನವೂ ಮೂಡಿಸಿತ್ತು. ಸಂಡೂರಿನಲ್ಲಿ ಕಮಲ ಅರಳಿಸಲು ವಿಫಲರಾಗಿರುವುದು ಪಕ್ಷದೊಳಗೆ ರೆಡ್ಡಿ ಇಮೇಜ್‌ ಗೆ ಧಕ್ಕೆ ತರುವ ಸಾಧ್ಯತೆಯಿದೆ.

ಹಣಬಲ ಕೆಲಸ ಮಾಡಿದೆ ಎಂದ ಬಂಗಾರು

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮಾತನಾಡಿ, ಸಂಡೂರು ಉಪಚುನಾವಣೆಯಲ್ಲಿ ಹಣಬಲ ಕೆಲಸ ಮಾಡಿದ್ದು, ಅಧರ್ಮ ಗೆಲುವು ಸಾಧಿಸಿದೆ. ಗೆಲ್ಲುವುದಾಗಿ ನಮ್ಮ ಪಕ್ಷದ ನಾಯಕರಿಗೆ ಮಾತುಕೊಟ್ಟಿದ್ದೆ. ಆದರೆ, ಆ ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಸೋಲಿನ ಹೊಣೆ ನಾನೇ ಹೋರುತ್ತೇನೆ. ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಮುಖ್ಯಮಂತ್ರಿ ಬಂದು ಕೆಲಸ ಮಾಡಿದ್ದಾರೆ. ಮತದಾನ ಹಿಂದಿನ ದಿನ ಗ್ಯಾರಂಟಿ ಯೋಜನೆಯ ಹಣವನ್ನು ಜನರ ಖಾತೆಗೆ ಜಮಾ ಮಾಡಲಾಗಿದೆ. ಶಿವರಾಜ್ ತಂಗಡಗಿ ದರೋಜಿ ಭಾಗದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಪ್ರಚಾರಕ್ಕೂ ಹಣ ಕೊಟ್ಟು ಜನರನ್ನು ಸೇರಿಸಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಮುಸ್ಲಿಂ, ಕುರುಬ ಸಮುದಾಯದ ಮತಗಳು ಅಂಕಿ ಅಂಶಗಳ ಪ್ರಕಾರ ನಾನು ಸೋತರು ಗೆದ್ದಂತೆ. 2028ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next