Advertisement

ದೇಶ, ಕಾಂಗ್ರೆಸ್‌ಗೆ ಮಾಡು ಇಲ್ಲವೆ ಮಡಿ ಸ್ಥಿತಿ

03:00 PM Jul 19, 2018 | Team Udayavani |

ಉಡುಪಿ:  2019ರ ಲೋಕಸಭೆ ಚುನಾವಣೆ ದೇಶ ಮತ್ತು ಕಾಂಗ್ರೆಸ್‌ಗೆ “ಮಾಡು ಇಲ್ಲವೆ ಮಡಿ’ ಆಗಿರುತ್ತದೆ ಎಂದು ಅಖೀಲ ಭಾರತ ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್‌ ಹೇಳಿದ್ದಾರೆ. ಬುಧವಾರ ಉಡುಪಿಯ ಕಾರ್ತಿಕ್‌ ಎಸ್ಟೇಟ್‌ ಹೊಟೇಲ್‌ ಸಭಾಂಗಣದಲ್ಲಿ ಜರಗಿದ ಅಖೀಲ ಭಾರತ ಮೀನುಗಾರ ಕಾಂಗ್ರೆಸ್‌ ಸಮಿತಿಯ ಮೂರನೇ ರಾಷ್ಟ್ರೀಯ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸಿದ್ಧಾಂತಗಳು ದೇಶದ ಜಾತ್ಯತೀತ ತಣ್ತೀಗಳಿಗೆ ವಿರುದ್ಧವಾಗಿವೆ. ಸಂವಿಧಾನ, ಜಾತ್ಯತೀತ ತಣ್ತೀ ಉಳಿಸಲು ಕಾಂಗ್ರೆಸ್‌ ಅಗತ್ಯ. ರಾಹುಲ್‌ ಗಾಂಧಿ ಅವರು ದೇಶದ ಉಳಿವಿಗೆ ಬೇಕಾದ ಜಾತ್ಯತೀತ, ಬಡವರ ಪರವಾದ ನಿಲುವನ್ನು ಹೊಂದಿದ್ದಾರೆ ಎಂದು ವಿಷ್ಣುನಾಥ್‌ ಹೇಳಿದರು.

Advertisement

ಮೋದಿಯಿಂದ ಅಪಾಯ
2019ರ ಲೋಕಸಭಾ ಚುನಾವಣೆ ಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆದ್ದು ಬಂದರೆ 2024ರಲ್ಲಿ ಪ್ರಜಾ ಪ್ರಭುತ್ವ ರೀತಿಯ ಚುನಾವಣೆ ನಡೆಯದಿರುವ ಅಪಾಯವೂ ಇದೆ. ಮೋದಿ ಸರಕಾರ ಮೀನುಗಾರರು, ರೈತರು, ಶ್ರಮಿಕ ವರ್ಗದ ವಿರುದ್ಧವಿದೆ. ನೋಟು ರದ್ದತಿ, ಜಿಎಸ್‌ಟಿಗಳ ನೇರ ಪ್ರಭಾವ ಸಾಮಾನ್ಯ ವರ್ಗದವರ ಮೇಲೆ ಬಿದ್ದಿದೆ ಎಂದವರು ಹೇಳಿದರು.

ಪ್ರಥಮ ಬಾರಿಗೆ ಪ್ರಣಾಳಿಕೆ
ರಾಜಕೀಯ ಪಕ್ಷವೊಂದು ಮೀನುಗಾರರಿಗೆ ಪ್ರತ್ಯೇಕವಾದ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿರುವುದು ಇದೇ ಮೊದಲು. ರಾಹುಲ್‌ ಗಾಂಧಿ ಸೂಚನೆಯಂತೆ ಅಖೀಲ ಭಾರತ ಮೀನುಗಾರ ಕಾಂಗ್ರೆಸ್‌ ಸಮಿತಿ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು 2019ರ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ವಿಷ್ಣುನಾಥ್‌ ಹೇಳಿದರು. ಎಐಸಿಸಿ ಸದಸ್ಯ ಅಮೃತ್‌ ಶೆಣೈ ಮಾತನಾಡಿ, “ಬಿಜೆಪಿಯವರು ಕೇವಲ ಧಾರ್ಮಿಕ ಭಾವನೆಗಳನ್ನು ಕೆರ ಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಮೀನುಗಾರರು ಹಾಗೂ ಸಾಮಾನ್ಯ ವರ್ಗದ ಜನರ ಬಗ್ಗೆ ಕಾಳಜಿ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆ ಮೀನುಗಾರರು, ಅಡಿಕೆ ಬೆಳೆಗಾರರು, ರಾಷ್ಟ್ರೀಯ ಹೆದ್ದಾರಿ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿಲ್ಲ. ಅವರು ರಾಜಕೀಯ, ಧರ್ಮದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮೀನುಗಾರಿಕೆ ಇದ್ದರೆ ಮಾತ್ರ ಆರ್ಥಿಕ ಚಟುವಟಿಕೆಗಳು ನಡೆಯಲು ಸಾಧ್ಯ. ಕಾಂಗ್ರೆಸ್‌ ಹಿಂದುಳಿದ ವರ್ಗದವರ ಪರ ವಾಗಿ ಇದೆ’ ಎಂದರು.
ಅಖೀಲ ಭಾರತ ಮೀನುಗಾರ ಕಾಂಗ್ರೆಸ್‌ ಸಮಿತಿ (ಎಐಎಫ್ಸಿ)ಯ ಅಧ್ಯಕ್ಷ ಟಿ.ಎನ್‌. ಪ್ರತಾಪನ್‌ ಅಧ್ಯಕ್ಷತೆ ವಹಿ ಸಿದ್ದರು. ಕಾರ್ಯಾಧ್ಯಕ್ಷ ಯು.ಆರ್‌. ಸಭಾಪತಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ಎಐಎಫ್ಸಿ ಪ್ರಧಾನ ಕಾರ್ಯದರ್ಶಿ ಎಂ. ಪೀರು ಸಾಹೇಬ್‌, ಕಾರ್ಯದರ್ಶಿ ಕಿರಣ್‌ ಕುಮಾರ್‌ ಉದ್ಯಾವರ, ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಮನೋಜ್‌ ಕರ್ಕೇರ, ಹರಿಯಪ್ಪ ಕೋಟ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. 

ಮೀನುಗಾರರು ಎಸ್‌ಸಿ/ಎಸ್‌ಟಿಗೆ: ಪ್ರಣಾಳಿಕೆ
ದೇಶದ ಎಲ್ಲ ಮೀನುಗಾರರನ್ನು ಎಸ್‌ಸಿ ಅಥವಾ ಎಸ್‌ಟಿ ಜಾತಿಗೆ ಸೇರ್ಪಡೆ ಗೊಳಿಸುವುದು (ಆಯಾ ರಾಜ್ಯಗಳ ವಿವೇಚನೆ), ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಮೀನುಗಾರರ ಸಾಮಾಜಿಕ, ಆರ್ಥಿಕ, 
ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಆಯೋಗ ರಚನೆ, ಮೀನುಗಾರರ ಸಾಲ ಮನ್ನಾಕ್ಕಾಗಿ ಆಯೋಗ ರಚನೆ, ಮೀನುಗಾರರ ಕಲ್ಯಾಣ ಮಂಡಳಿ ರಚನೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಮೀನುಗಾರರಿಗೆ ದೇಶಾದ್ಯಂತ ಏಕರೀತಿಯ ಪಿಂಚಣೆ ವ್ಯವಸ್ಥೆ ಮೊದಲಾದ 25 ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಜು. 19ರಂದು ಪ್ರಣಾಳಿಕೆ ಅಂತಿಮ ರೂಪ ಪಡೆದುಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next