Advertisement

ಡೋಲು ವಾದಕ ಶತಾಯುಷಿ ಗುರುವ ಕೊರಗರಿಗೆ ಅಭಿನಂದನೆ

06:40 AM Mar 29, 2018 | |

ಉಡುಪಿ: ಭಾರವಾದ ಡೋಲು  ಹೊತ್ತು ಲೀಲಾಜಾಲವಾಗಿ ಬಹು ಹೊತ್ತು ಡೋಲು ವಾದನ ನಡೆಸುವ, ಕಟ್ಟುಮಸ್ತಾದ ಶರೀರದಲ್ಲಿ ಯುವಕರನ್ನೂ ನಾಚಿಸುವ ಶತಾಯುಷಿ (102) ಗುರುವ ಕೊರಗರಿಗೆ ಹಲವು ಸಂಘಸಂಸ್ಥೆಗಳು ಬುಧವಾರ ಅಭಿನಂದಿಸಿದವು. 

Advertisement

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಸಂಸ್ಥೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಾಹೆ ವಿ.ವಿ., ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಗುರುವ ಕೊರಗರ ಜನ್ಮ ಶತಮಾನೋತ್ಸವ ಸಂಭ್ರಮ- ಸಮಾವೇಶ, ಸಮ್ಮಾನ, ವಿಚಾರ ಸಂಕಿರಣ, ಸಂವಾದ, ಕಲಾ ಪ್ರದರ್ಶನ ನಡೆದವು. 


ಯುವಕರಿಗೆ ಮಾದರಿ 
ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ 70 ವರ್ಷ ವಾದರೂ ಬುಡಕಟ್ಟು ಜನಾಂಗದವರನ್ನು  ಮುಖ್ಯವಾಹಿನಿಗೆ ತರಲು ಸಾಧ್ಯವಾಗದ ಬಗ್ಗೆ  ವಿಷಾದಿಸಿದರು. ಈಗಲೂ 15 ಕೆ.ಜಿ. ತೂಕದ ಡೋಲು ಹೊತ್ತು ಎರಡು ಗಂಟೆ ಕಾಲ ಲೀಲಾಜಾಲವಾಗಿ ಡೋಲು ಬಾರಿಸುವ ಗುರುವರ ಸಾಮರ್ಥ್ಯ ಯುವಕರಿಗೆ ಮಾದರಿ ಎಂದರು. 

102 ಅಲ್ಲ 106
ವೈಟ್‌ ಕಾಲರ್‌ ಉದ್ಯೋಗದ ಧಾವಂತದಲ್ಲಿ  ತಮ್ಮ  ಕುಲಕಸುಬು ಮರೆ ಯಾಗುತ್ತಿದೆ. ಸ್ಥಳೀಯತೆ ಉಳಿಸಿಕೊಳ್ಳಲು  ಸೂಕ್ತ ಪ್ರೋತ್ಸಾಹ,  ಬುಡಕಟ್ಟು ಜನಾಂಗದವರಿಗೆ ನೀಡ ಬೇಕಾದ ಅಗತ್ಯವಿದೆ. ಮನಸ್ಸು  ಮುದವಾಗಿ ಇಟ್ಟುಕೊಂಡಿರುವುದೇ ಗುರುವರ ಶತಾಯುಷ್ಯಕ್ಕೆ ಕಾರಣ ವಿರಬಹುದು. ಅವರಿಗೆ ಅಧಿಕ ಮಾಸದ ಲೆಕ್ಕವನ್ನು ಕೂಡಿಸಿದರೆ ಗುರುವರ ವರ್ಷ 102 ಅಲ್ಲ, 106 ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಹೇಳಿದರು.
 
ಮುಕ್ತವಾಗಿ ಬೆರೆಯಿರಿ
ಅಧ್ಯಕ್ಷತೆ ವಹಿಸಿದ್ದ ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ  ಕಣ್ಣೂರು  ಮಾತನಾಡಿ, ಈಗ 40 ವರ್ಷವಾದರೆ 70 
ವರ್ಷವಾದಂತೆ ಕಂಡುಬರುತ್ತಿದೆ. ಆದರೆ ಶತಾಯುಷಿಯಾಗಿ ಬದುಕುವುದು ಅಪರೂಪ. ಬುಡಕಟ್ಟು  ಜನಾಂಗದವರ ಬಗ್ಗೆ  ಅನೇಕ ಅಧ್ಯಯನ, ಪಿ.ಎಚ್‌ಡಿ.,  ಪುಸ್ತಕಗಳು ಬಂದರೂ ಅವರು ಸಮಾಜ ದೊಳಗೆ ಬರುತ್ತಿಲ್ಲ;  ಬಹುಶಃ   ನಾವು ಅವರನ್ನು ಮುಕ್ತವಾಗಿ ಕರೆದಿಲ್ಲ.  ನಾವು ಮುಕ್ತವಾಗಿ ಅವರನ್ನು ಸೇರಬೇಕಾಗಿದೆ. ಅವರ ಸಾಮಗ್ರಿಗಳನ್ನು ಸಂತೋಷದಿಂದ ಖರೀದಿಸಿ ಪ್ರೋತ್ಸಾಹಿಸಬೇಕು ಎಂದರು. 

ಆಗ- ಈಗ…
ಕು.ಶಿ.ಹರಿದಾಸ ಭಟ್ಟರು ಪ್ರಾಂಶುಪಾಲ ರಾಗಿದ್ದ ಸಂದರ್ಭ  ನಾನು ಅವರೊಂದಿಗೆ ರಶ್ಯಾಕ್ಕೆ ಜನಪದ ಉತ್ಸವಕ್ಕೆ ಹೋಗಿದ್ದೆ. ಆಗ ಡೋಲು ವಾದನ ಪ್ರದರ್ಶಿಸಲಾಯಿತು. 

ಸುಮಾರು 10 ರಾಷ್ಟ್ರಗಳಲ್ಲಿ  ಇದನ್ನು  ಪ್ರದರ್ಶಿಸಿದ್ದೇನೆ. ಈಗ ಜಾನಪದ ಅಕಾಡೆಮಿ ಅಧ್ಯಕ್ಷನಾಗಿ ಗುರುವರನ್ನು ಸಮ್ಮಾನಿಸಲು ಸಂತೋಷ ವಾಗುತ್ತಿದೆ ಎಂದು ಟಾಕಪ್ಪ ಕಣ್ಣೂರು ಹೇಳಿದರು. 

Advertisement

ವಿದ್ವಾಂಸ ಡಾ| ಯು.ಪಿ. ಉಪಾಧ್ಯಾಯ, ಕನ್ನಡ ಸಂಸ್ಕೃತಿ ಇಲಾ ಖೆಯ ಪೂರ್ಣಿಮಾ ಮುಖ್ಯ ಅತಿಥಿ ಗಳಾಗಿದ್ದರು. ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೆಗಂಗೆ ಸ್ವಾಗತಿಸಿ,  ಉಪನ್ಯಾಸಕಿ ಶರಿತಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ ಅಕಾಡೆಮಿ ರಿಜಿಸ್ಟ್ರಾರ್‌ ಸಿದ್ರಾಮ ಸಿಂಧೆ ವಂದಿಸಿದರು. 
 
ವಿಚಾರ ಸಂಕಿರಣ
“ಗುರುವ ಕೊರಗ ಮತ್ತು ಬುಡಕಟ್ಟು ಸಂಸ್ಕೃತಿ: ಬಹುಮುಖೀ ಜ್ಞಾನದ ಆಯಾಮ ಗಳು’ ಕುರಿತು ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ| ಹಿ.ಚಿ.ಬೋರಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಿತು. ಹಳೆಯಂಗಡಿ ಸರಕಾರಿ ಎಸ್‌.ಎನ್‌.ಎಸ್‌. ಪ.ಪೂ. ಕಾಲೇಜಿನ ಜ್ಯೋತಿ ಚೇಳಾçರು, ಬುಡಕಟ್ಟು ಸಮಾಜದ ಚಿಂತಕ ವಿ.ಗಣೇಶ ಕೊರಗ, ಜನಪದ ವಿದ್ವಾಂಸ ಎಸ್‌.ಎ. ಕೃಷ್ಣಯ್ಯ ಮಾತನಾಡಿದರು. ಬಳಿಕ ವಿವಿಧ ಕಲಾಪ್ರದರ್ಶನಗಳು ನಡೆದವು. 

ಆಕ್ಷೇಪ
ಆಮಂತ್ರಣ ಪತ್ರಿಕೆಯಲ್ಲಿ ಗುರುವ ಕೊರಗರನ್ನು ಏಕವಚನದಲ್ಲಿ ಸಂಬೋಧಿಸಿರುವುದಕ್ಕೆ ಕುಂದಾಪುರದ ಗಣೇಶ ಕೊರಗ ಅವರು ಆಕ್ಷೇಪಿಸಿದರು. 

ಕಲ್ಲೊಗ್ಗರಣೆ ಗುಟ್ಟೆ?
– ಗುರುವರ ಮನೆಯಲ್ಲಿ ಹಿಂದೆ ಸಾಂಬಾರಿಗೆ ಕಲ್ಲು ಒಗ್ಗರಣೆ ಹಾಕುತ್ತಿ ದ್ದರಂತೆ. ಇದರ ಬಗೆಗೆ ವೈದ್ಯಕೀಯ ಅಧ್ಯಯನ ನಡೆಯಬೇಕಾಗಿದೆ. ಅವರ ದೇಹ ಸಾಮರ್ಥ್ಯ, ಆಯುಷ್ಯದ ಗುಟ್ಟು ಇದೂ ಇರಬಹುದು. 
– ಗುರುವರು ಮಾಡುವ ಬುಟ್ಟಿ ತಯಾರಿಕೆಗೆ ಬಳಸುವ ಬಿಳಲು ಇದ್ದಲ್ಲಿ ಹೆಬ್ಟಾವಿನಂತಹ ಹಾವುಗಳು ಹತ್ತಿರ ಸುಳಿಯುವುದಿಲ್ಲವಂತೆ.   
– ಒಟ್ಟು 85 ಬುಡಕಟ್ಟು ಜನಾಂಗದ ವರಿದ್ದಾರೆ. ಇವರಲ್ಲಿ ಕೊರಗರು, ಮಲೆಕುಡಿಯರು,ಕುಡುಬಿಯರು/ಮರಾಟಿಗರು, ಸೋಲಿಗರು, ಜೇನುಕುರುಬರು ಈ ಐವರು ಮೂಲ ನಿವಾಸಿಗಳು. ಈ ಐವರಲ್ಲಿ ಕೊರಗರನ್ನು ಮಾತ್ರ ಅಸ್ಪ್ರಶ್ಯರಂತೆ ನೋಡಲಾಗುತ್ತಿದೆ.
–  ಇವರು ಕೊರಗರಲ್ಲ. ಗೋವಳರು. ಗಂಟಿ ಮೇಯಿಸುವುದು ಎಂಬ ಶಬ್ದ ಈಗಲೂ ಬಳಕೆಯಲ್ಲಿದೆ. ಇವರ ಮೂಲ ವಿಧಿ ವಿಧಾನಗಳು ಕಣ್ಮರೆಯಾಗಿವೆ. ಇವರ ಭಾಷೆ ಅಳಿದಿದೆ ಎಂದು ಯುನೆಸ್ಕೊ ವರದಿ ಮಾಡಿದೆ. 
– ಬುಡಕಟ್ಟು ಜನಾಂಗದವರಿರುವಲ್ಲಿ ಒಂದು ಥೀಮ್‌ ಪಾರ್ಕ್‌ ನಿರ್ಮಾಣದ ಅಗತ್ಯವಿದೆ. 
– ಎಸ್‌.ಎ. ಕೃಷ್ಣಯ್ಯ, 
ಸದಸ್ಯ ಸಂಚಾಲಕರು, ಜಾನಪದ ಅಕಾಡೆಮಿ 

Advertisement

Udayavani is now on Telegram. Click here to join our channel and stay updated with the latest news.

Next