ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನ ಸಭೆಯ ನಂತರವೂ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ನಿಖೀಲ್ ಕುಮಾರಸ್ವಾಮಿ ಪರ ಕೆಲಸ ಮಾಡದಿರುವುದು ಜೆಡಿಎಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರು ಹಾಗೂ ಮಂಡ್ಯದಲ್ಲಿ ಚುನಾವಣಾ ಉಸ್ತುವಾರಿ ವಹಿಸಿರುವ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಈ ಕುರಿತು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಂಡ್ ಆದೇಶದಂತೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಲೇ ನಾಗಮಂಗಲ, ಶ್ರೀರಂಗಪಟ್ಟಣ ಸೇರಿದಂತೆ ಕ್ಷೇತ್ರದ ಹಲವೆಡೆ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆಂಬಲಿಗರು ನೇರವಾಗಿಯೇ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡುತ್ತಿದ್ದಾರೆ. ಸುಮಲತಾ ಅವರ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ಈ ಬಗ್ಗೆ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತರಬೇಕು ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಷ್ಟೇ ವಿರೋಧ ಮಾಡಿದರೂ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಹೀಗಾಗಿ, ಯಾರೋ ಕೆಲಸ ಮಾಡುತ್ತಿಲ್ಲ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ನೀವು ನಿಮ್ಮ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 12 ರಿಂದ ಜಂಟಿ ಪ್ರಚಾರ ಕೈಗೊಳ್ಳಲಿದ್ದಾರೆ. ಆ ವೇಳೆಗೆ ಎಲ್ಲವೂ ಸರಿಹೋಗಬಹುದು. ಆದರೆ, ಕೆಲವು ಮುಖಂಡರು ಕೆಲಸ ಮಾಡುತ್ತಿಲ್ಲ ಎಂದು ಎಲ್ಲ ಕಾಂಗ್ರೆಸ್‌ನವರನ್ನು ಅನುಮಾನದಿಂದ ನೋಡುವುದು ಬೇಡ. ಮಾದೇಗೌಡರು ಸೇರಿ ಮೂಲ ಕಾಂಗ್ರೆಸ್ಸಿಗರು ನಿಖೀಲ್ ಪರ ಕೆಲಸ ಮಾಡುತ್ತಿದ್ದಾರೆ.ಹೀಗಾಗಿ, ನೀವು ಹೆಚ್ಚು ತಲೆಕಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಮಂಡ್ಯದಲ್ಲಿ ಕಾಂಗ್ರೆಸ್‌ನವರು ಕೈ ಕೊಟ್ಟಿರುವುದರಿಂದ ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸಚಿವ ಜಿ.ಟಿ.ದೇವೇಗೌಡರೂ ಪೂರ್ಣ ಮನಸ್ಸಿನಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಆ ರೀತಿ ಮಾಡಿದರೆ ಬೇರೆ ರೀತಿಯ ಸಂದೇಶ ಹೋಗಲಿದೆ. ಅದು ಬೇರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿ ಆದಷ್ಟು ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಪರಸ್ಪರ ಸಹಕಾರದಿಂದ ಕೆಲಸ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ.