Advertisement

ಅಭಿನಂದನೆಗಳು ಇಸ್ರೊ

11:38 PM Jul 22, 2019 | mahesh |

ಚಂದ್ರನ ಮೇಲೆ ಮಾನವ ಹೆಜ್ಜೆಯೂರಿದ ಸುವರ್ಣ ಮಹೋತ್ಸವ ಆಚರಣೆಯಾದ ಎರಡೇ ದಿನಗಳಲ್ಲಿ ಇಸ್ರೊ ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2ನ್ನು ಯಶಸ್ವಿಯಾಗಿ ನೆರವೇರಿಸಿದೆ. ಮಧ್ಯಾಹ್ನ 2.43ಕ್ಕೆ ಸರಿಯಾಗಿ ಚಂದ್ರಯಾನ-2 ಮಾಡ್ನೂಲನ್ನು ಹೊತ್ತುಕೊಂಡು ಬಾಹುಬಲಿ (ಜಿಎಸ್‌ಎಲ್‌ವಿ-ಎಂಕೆ3) ರಾಕೆಟ್‌ 130 ಕೋಟಿ ಜನರ ಆಶೋತ್ತರಗಳೊಂದಿಗೆ ನಭಕ್ಕೆ ನೆಗೆದಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಜು.15ಕ್ಕೆ ನಿಗದಿಯಾಗಿದ್ದ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಪತ್ತೆಯಾದ ಚಿಕ್ಕದೊಂದು ತಾಂತ್ರಿಕ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಆದರೆ ಒಂದೇ ವಾರದಲ್ಲಿ ಈ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು ಇಸ್ರೊ ಚಂದ್ರಯಾನ-2ನ್ನು ನೆರವೇರಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು, ಅತಿ ಕಡಿಮೆ ಖರ್ಚಿನಲ್ಲಿ ಮಾಡಿದ ಈ ಮಹಾಸಾಧನೆಯ ಎಲ್ಲ ಕೀರ್ತಿ ಇಸ್ರೊ ವಿಜ್ಞಾನಿಗಳಿಗೆ ಸಲ್ಲಬೇಕು. ಇಸ್ರೊ ಅಧ್ಯಕ್ಷ ಕೆ. ಶಿವನ್‌ ನೇತೃತ್ವದ ತಂಡ ಭಾರತವಿಂದು ಜಗತ್ತಿನ ಎದುರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದೆ.ಅಭಿನಂದನೆಗಳು ಇಸ್ರೊ.

Advertisement

ಜು.15ರಂದು ಮುಂಜಾನೆ ಹೊತ್ತಿಗೆ ಬಾಹುಬಲಿ ರಾಕೆಟ್‌ ನಭಕ್ಕೇರುವ 56 ನಿಮಿಷ ಮೊದಲು ತಾಂತ್ರಿಕ ದೋಷವೊಂದು ಪತ್ತೆಯಾದ ಕೂಡಲೇ ಯಾನವನ್ನು ರದ್ದುಗೊಳಿಸಿದ ಇಸ್ರೊ ನಡೆ ಅತ್ಯಂತ ಪ್ರಜ್ಞಾವಂತಿಕೆಯದ್ದು. ಒಂದು ವೇಳೆ ಪೂರ್ವ ನಿಗದಿಯಾಗಿರುವಂತೆ ಉಡ್ಡಯನ ಮಾಡಿದ್ದರೆ ಅಥವಾ ತಾಂತ್ರಿಕ ದೋಷವನ್ನು ಪತ್ತೆ ಮಾಡಲು ಸಾಧ್ಯವಾಗದೆ ಇರುತ್ತಿದ್ದರೆ ಅಥವಾ ಅವಸರದಲ್ಲಿ ದೋಷವನ್ನು ಸರಿಪಡಿಸಿ ಉಡ್ಡಯನಕ್ಕೆ ಹಸಿರು ನಿಶಾನೆ ತೋರಿಸಿದ್ದರೆ ಅದು ಮಾಡಬಹುದಾಗಿದ್ದ ಪರಿಣಾಮ ಘೋರ ವಾಗುತ್ತಿತ್ತು. ಅನೇಕ ಕಾರಣಗಳಿಗೆ ಚಂದ್ರಯಾನ-2 ಭಾರತದ ಪಾಲಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಮಹತ್ವದ್ದಾಗಿದೆ. ಅಂತೆಯೇ ಅದರಿಂದಾಗ ಬಹುದಾದ ಲಾಭವೂ ಭಾರತದ ಜೊತೆಗೆ ಇಡೀ ಜಗತ್ತಿಗೆ ಪ್ರಯೋಜನಕಾರಿ ಆಗಲಿದೆ. ಯಾವ ದೇಶವೂ ಇಷ್ಟರ ತನಕ ಹೋಗದಿರುವ ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತ ಹೋಗಲಿದೆ. ಭವಿಷ್ಯದ ಚಂದ್ರಯಾನಗಳಲ್ಲಿ ಆಗಲಿರುವ ಮಹತ್ವದ ಸ್ಥಿತ್ಯಂತರಗಳಿಗೆ ವೇದಿಕೆಯಾಗುವಂಥ ಚಂದ್ರಯಾನವಿದು ಎಂಬ ಕಾರಣಕ್ಕೂ ಚಂದ್ರಯಾನ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಇಡೀ ಜಗತ್ತು ಇಸ್ರೊದ ಚಂದ್ರಯಾನವನ್ನು ಭಾರೀ ಕುತೂಹಲದಿಂದ ಗಮನಿಸುತ್ತಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ಮಾಡಿದ ಮೊದಲ ದೇಶ ಎಂಬ ಹಿರಿಮೆಗೂ ಈ ಚಂದ್ರಯಾನ ಪಾತ್ರವಾಗಲಿದೆ. ಅದರಲ್ಲೂ ಈ ಎಲ್ಲ ತಂತ್ರಜ್ಞಾನವನ್ನು ನಮ್ಮ ವಿಜ್ಞಾನಿಗಳು ಸ್ವತಂತ್ರವಾಗಿ ತಯಾರಿಸಿದ್ದಾರೆ ಎನ್ನುವುದು ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಸಾಧಿಸಿದ ಪ್ರಗತಿಯನ್ನು ಜಗತ್ತಿಗೆ ಸಾರುತ್ತದೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಮೊದಲ ಚಂದ್ರಯಾನವೂ ಇಷ್ಟರ ತನಕ ಯಾರಿಂದಲೂ ಸಾಧ್ಯವಾಗದ ಕೆಲವು ವಿಷಯಗಳನ್ನು ಜಗತ್ತಿಗೆ ತಿಳಿಸಿತ್ತು. ಚಂದ್ರನಲ್ಲಿ ನೀರು ಇದೆ ಎಂಬುದನ್ನು ಮೊದಲು ಪತ್ತೆಹಚ್ಚಿದ್ದು ನಮ್ಮ ಚಂದ್ರಯಾನ.

ನೂರಾರು ಕೋಟಿ ಖರ್ಚು ಮಾಡಿ ಚಂದ್ರಯಾನ ಮಾಡುವುದರಿಂದ ದೇಶಕ್ಕಾಗುವ ಲಾಭವೇನು ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ.ಭವಿಷ್ಯದಲ್ಲಿ ರಾಷ್ಟ್ರಗಳ ನಡುವೆ ಸ್ಪರ್ಧೆ ಎಂದು ಇರುವುದಾದರೆ ಅದು ಬಾಹ್ಯಾಕಾಶದಲ್ಲಿ. ಇಂಥ ಸ್ಪರ್ಧೆಯಲ್ಲಿ ಸಶಕ್ತ ಪಾಲುದಾರನಾಗಲು ಚಂದ್ರಯಾನದಂಥ ಸಾಹಸಗಳು ನೆರವಾಗಲಿವೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯ ಸಂವರ್ಧನೆಗೆ ನೆರವಾಗುವ ಕಾರ್ಯಕ್ರಮವಿದು. 2022ರಲ್ಲಿ ಭಾರತ ಬಾಹ್ಯಾಕಾಶಕ್ಕೆ ಮಾನವ ಸಹಿತ ಯಾತ್ರೆ ಕೈಗೊಳ್ಳುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ಚಂದ್ರಯಾನ-2 ಅದಕ್ಕೆ ಅಡಿಪಾಯವಾಗಲಿದೆ. ಪರೋಕ್ಷವಾಗಿ ಸರಕಾರ, ಉದ್ಯಮ, ಮಾಧ್ಯಮ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳನ್ನು ಉತ್ತೇಜಿಸುವ ಯಾನವಿದು. ಹೊಸ ಸಂಶೋಧನೆ, ಹೊಸ ತಂತ್ರಜ್ಞಾನ, ಹೊಸ ಜಾಗತಿಕ ಸಂಬಂಧಗಳು ಇತ್ಯಾದಿಗಳಿಗೆ ಪ್ರೇರಕವಾಗುವ ಅವಕಾಶ ಚಂದ್ರಯಾನದಲ್ಲಿದೆ.

ಮುಂದಿನ ಶತಮಾನಗಳಲ್ಲಿ ಇನ್ನಷ್ಟು ದೇಶಗಳು ಬಾಹ್ಯಾಕಾಶ ಪರಿಕ್ರಮ ಪ್ರಾರಂಭಿಸುವ ಸಾಧ್ಯತೆಗಳಿವೆ. ಈ ಸ್ಪರ್ಧೆಯಲ್ಲಿ ಮುಂಚೂಣಿ ಯಲ್ಲಿರಬೇಕಾದರೆ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪರಿಣತ ರಾಗಿರಬೇಕು. ಚಂದ್ರಯಾನ-2ರ ಯಶಸ್ಸು ಈ ಮಾದರಿಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ವಿಪುಲ ಅವಕಾಶಗಳ ಬಾಗಿಲು ತೆರೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next