Advertisement

ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸ್ಪರ್ಧೆಗೆ ಅರ್ಹತೆಯ ಗೊಂದಲ

10:19 PM Jan 27, 2021 | Team Udayavani |

ಪುತ್ತೂರು: ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದು, ಸ್ಪರ್ಧಿಸಬಹುದಾದ ಅರ್ಹತೆಗಳ ಬಗ್ಗೆ ಕೆಲ ಸಂದೇಹಗಳಿದ್ದು, ಈ ಬಗ್ಗೆ ಜಿಲ್ಲಾಡಳಿತ ರಾಜ್ಯ ಚುನಾವಣ ಆಯೋಗದ ಗಮನಕ್ಕೆ ತಂದಿದೆ. ಅಲ್ಲಿನ ನಿರ್ದೇಶನದಂತೆ ಮುಂದುವರಿಯಲು ನಿರ್ಧರಿಸಿದೆ.

Advertisement

ಗ್ರಾ.ಪಂ. ಚುನಾವಣೆಯು ವಾರ್ಡ್‌ ವಾರು ನಿಗದಿಪಡಿಸಿದ ಮೀಸಲಾತಿ ಪ್ರಕಾರ ನಡೆಯುತ್ತದೆ. ಮೀಸಲಾತಿ ಕ್ಷೇತ್ರಗಳಲ್ಲಿ ಅದಕ್ಕೆ ಒಳಪಡುವ ಕೆಟಗೆರಿ ಅಭ್ಯರ್ಥಿಗಳೇ ಸ್ಪರ್ಧಿಸಲು ಅರ್ಹತೆ ಪಡೆದಿರುತ್ತಾರೆ. ಸಾಮಾನ್ಯ ಕ್ಷೇತ್ರದಲ್ಲಿ ಯಾವುದೇ ವರ್ಗದ ಅಭ್ಯರ್ಥಿಗಳು ಸ್ಪರ್ಧಿಸಬಹುದು. ಉದಾಹರಣೆಗೆ ಸಾಮಾನ್ಯ ಸ್ಥಾನ ನಿಗದಿಯಾದ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಎ, ಬಿ, ಎಸ್‌ಸಿ, ಎಸ್‌ಟಿ ಪುರುಷ ಅಥವಾ ಮಹಿಳೆ ಹೀಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಆದರೆ ಹಿಂದುಳಿದ ವರ್ಗ ಎ, ಬಿ, ಎಸ್‌ಟಿ, ಎಸ್‌ಸಿ ಮೀಸಲಾತಿ ನಿಗದಿ ಕ್ಷೇತ್ರದಲ್ಲಿ ಆ ಕೆಟಗೆರಿಗೆ ಸೇರಿದವರು ಮಾತ್ರ ಸ್ಪರ್ಧೆ ಮಾಡಬೇಕು ಅನ್ನುವುದು ನಿಯಮ. ಅದರಂತೆ, ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಸಂದರ್ಭದಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿರುವ ಬೇರೆ-ಬೇರೆ ಕೆಟಗೆರಿಯ ಅಭ್ಯರ್ಥಿಗಳು ಆ ಕೆಟಗೆರಿಗೆ ಮೀಸಲಾಗಿರುವ ಅಧ್ಯಕ್ಷ-ಉಪಾಧ್ಯಕ್ಷತೆಯ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ಅವಕಾಶಗಳು ಇದೆಯೇ ಅಥವಾ ಇಲ್ಲವೇ ಅನ್ನುವುದು ಈಗ ಮೂಡಿರುವ ಪ್ರಶ್ನೆಯಾಗಿದೆ.

ಏನಿದು ಗೊಂದಲ?

ಉದಾಹರಣೆಗೆ “ಎಚ್‌’ ಎನ್ನುವ ಗ್ರಾ.ಪಂ.ನಲ್ಲಿ ಹಿಂದುಳಿದ ವರ್ಗ ಬಿ ಕೆಟಗೆರಿಗೆ ಸೇರಿದ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದಿರುತ್ತಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾದಾಗ “ಎಚ್‌’ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ನಿಗದಿಯಾಗಿರುತ್ತದೆ ಎಂದಿಟ್ಟುಕೊಳ್ಳೋಣ. ಆಗ ಈ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ಹಿಂದುಳಿದ ವರ್ಗ ಬಿ ಅಭ್ಯರ್ಥಿಯು ಸ್ಪರ್ಧಿಸಲು ಅರ್ಹನಾಗಿರುತ್ತಾನೋ ಅಥವಾ ಆತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಅರ್ಹತೆ ಕಳೆದುಕೊಳ್ಳುತಾನೋ ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ. ಕೆಲ ಅಧಿಕಾರಿಗಳು ಹೇಳುವ ಪ್ರಕಾರ, ಜಾತಿ ಪ್ರಮಾಣಪತ್ರ ನೀಡಿದರೆ ಸ್ಪರ್ಧೆ ಮಾಡಬಹುದು. ಹಿಂದಿನ ಅವಧಿಯಲ್ಲಿ ಈ ರೀತಿ ಅವಕಾಶ ಇತ್ತು ಎಂದರೆ, ಇನ್ನೂ ಕೆಲ ಅಧಿಕಾರಿಗಳು ಅದೇ ಕೆಟಗರಿಯಲ್ಲಿ ಗೆದ್ದಿರುವ ಬೇರೆ ಅಭ್ಯರ್ಥಿಗಳು ಇದ್ದಲ್ಲಿ ಅವರಿಗೆ ಪ್ರಾಶಸ್ಯ ಸಿಗುತ್ತದೆ. ಇಲ್ಲದಿದ್ದರೆ ಬೇರೆ ಕೆಟಗರಿಗೆ ಮೀಸಲಾತಿ ವರ್ಗಾಗೊಳ್ಳುತ್ತದೆ.ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಉತ್ತರ ನೀಡಿರುವುದರಿಂದ ಅರ್ಹತೆ ಬಗ್ಗೆ ಗೊಂದಲ ಮೂಡಿದೆ.

ಹಿಂದೆ ಹೇಗಿತ್ತು :

Advertisement

ಈ ಹಿಂದಿನ ಗ್ರಾ.ಪಂ. ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೂ, ಚುನಾವಣೆಯಲ್ಲಿ ಸ್ಪರ್ಧಿಸಿದ ಮೀಸಲಾತಿಗೆ ಸಂಬಂಧ ಇರಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷತೆಗೆ ಆತ ಗೆದ್ದಿರುವ ವಾರ್ಡ್‌ ಮೀಸಲಾತಿ ನಿಯಮ ಅನ್ವಯ ಆಗುತ್ತಿರಲಿಲ್ಲ. ಬದಲಾಗಿ ಆತನ ಜಾತಿ ಕೆಟಗೆರಿ ಆಧಾರವೇ ಪರಿಗಣಿಸಲ್ಪಡುತಿತ್ತು. ಉದಾಹರಣೆಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಗೆ ಮೀಸಲಾಗಿದ್ದರೆ, ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಹಿಂದುಳಿದ ವರ್ಗ ಬಿ ಗೆ ಒಳಪಟ್ಟಿದ್ದರೆ ಅವರಿಗೆ ಸ್ಪರ್ಧಿಸಲು ಅವಕಾಶ ಇತ್ತು. ಅದಕ್ಕೆ ಆತ ಜಾತಿ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕಿತ್ತು ಅನ್ನುತ್ತಾರೆ ಕೆಲ ಗ್ರಾ.ಪಂ.ಮಾಜಿ ಅಧ್ಯಕ್ಷರು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಕೆಲ ಸ್ಥಾನಗಳಲ್ಲಿ ಸ್ಪರ್ಧಿಸಲು ಅರ್ಹತೆಯ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣ ಆಯೋಗದ ಗಮನಕ್ಕೆ ತರಲಾಗಿದೆ. ಅಲ್ಲಿಂದ ಕ್ಲಾರಿಪಿಕೇಶನ್‌ ಸಿಗಲಿದ್ದು, ಸಂದೇಹಗಳಿಗೆ ಉತ್ತರ ಸಿಗಲಿದೆ.  -ಡಾ| ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next