Advertisement

ಗೊಂದಲ ಮೂಡಿಸಿದ ಹಸುರು ಪಟಾಕಿ!

10:22 PM Nov 11, 2020 | mahesh |

ಉಡುಪಿ: ರಾಜ್ಯ ಸರಕಾರ ದೀಪಾವಳಿಗೆ ಹಸುರು ಪಟಾಕಿಗಳನ್ನಷ್ಟೇ ಸಿಡಿಸ ಬಹುದು ಎಂದು ಆದೇಶ ಹೊರಡಿಸಿರುವ ಹಿನ್ನೆಲೆ ಯಲ್ಲಿ ಈಗಾಗಲೇ ಪಟಾಕಿಗಳನ್ನು ತರಿಸಿಕೊಂಡಿರುವ ವರ್ತಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಹಸುರು ಪಟಾಕಿಯ ಮಾಹಿತಿ ಇಲ್ಲದೆ ಜನ ಪರದಾಡುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ 6 ಹೋಲ್‌ಸೇಲ್‌, 25 ರಿಟೇಲ್‌ ಪಟಾಕಿ ವ್ಯಾಪಾರಿಗಳಿದ್ದಾರೆ. ಅವರೆಲ್ಲರೂ ಲಕ್ಷಾಂತರ ರೂ.ಗಳ ಪಟಾಕಿಗಳನ್ನು ನೇರವಾಗಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದು, ಈಗ ತಮ್ಮಲ್ಲಿರುವುದು ಯಾವ ಪಟಾಕಿ ಎಂಬ ಮಾಹಿತಿ ಇಲ್ಲದೆ ಪರದಾಡುತ್ತಿದ್ದಾರೆ.

ಏನಿದು ಹಸುರು ಪಟಾಕಿ?
ವೈಜ್ಞಾನಿಕ, ಕೈಗಾರಿಕೆ ಸಂಶೋಧನ ಮಂಡಳಿ (ಸಿಎಸ್‌ಐಆರ್‌) ಹಾಗೂ ಎನ್‌ಇಇಆರ್‌ಐಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಪಟಾಕಿಗಳಲ್ಲಿ ಲೀಥಿಯಂ, ಆರ್ಸೆನಿಕ್‌, ಬೇರಿಯಂ ಮತ್ತು ಸತುವಿನಂಥ ಅಪಾಯಕಾರಿ ರಾಸಾಯನಿಕಗಳು ಇರುವುದಿಲ್ಲ. ಈ ಪಟಾಕಿಗಳು ಸ್ಫೋಟಗೊಂಡಾಗ ಹೆಚ್ಚು ಹೊಗೆಯ ಬದಲು ನೀರಿನ ಆವಿಯನ್ನಷ್ಟೇ ಬಿಡುಗಡೆ ಮಾಡುತ್ತವೆ. ಈ ಆವಿಯು ಧೂಳು ಮೇಲೇಳದಂತೆ ತಡೆಯುತ್ತದೆ. ಇವು ಸಾಮಾನ್ಯ ಪಟಾಕಿಗಳಿಗಿಂತ ಶೇ. 30ರಷ್ಟು ಕಡಿಮೆ ಮಾಲಿನ್ಯಕಾರಕಗಳಾಗಿವೆ. ಅಲ್ಲದೆ ಇವುಗಳ ಸದ್ದು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಇರುತ್ತವೆ.
ಮಾರುಕಟ್ಟೆಯಲ್ಲಿದೆ ಸಿಎಸ್‌ಐಆರ್‌ ಸಂಸ್ಥೆಯು ಹಸುರು ಪಟಾಕಿ ಫಾರ್ಮುಲಾವನ್ನು ಬಳಸಿ ತಯಾರಿಸುವ ಪಟಾಕಿಗಾಗಿ ಈಗಾಗಲೇ ಶಿವಕಾಶಿಯ 400 ಪಟಾಕಿ ತಯಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿನ ಪಟಾಕಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ.

ಬೀದಿಗೆ ಬೀಳುವ ಸ್ಥಿತಿ
2-3 ತಿಂಗಳ ಹಿಂದೆಯೇ ಪಟಾಕಿ ನಿಷೇಧಿಸಿದ್ದರೆ ನಾವು ಖರೀದಿಸುತ್ತಿರಲಿಲ್ಲ. ಈಗಾಗಲೇ ಲಕ್ಷಾಂತರ ರೂ. ವ್ಯಯಿಸಿ ಪಟಾಕಿ ಖರೀದಿಸಿರುವ ರಿಟೇಲ್‌ ವರ್ತಕರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಇನ್ನಾದರೂ ಸರಕಾರ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಈ ವರ್ಷ ಮಾರಾಟಕ್ಕೆ ಅನುವು ಮಾಡಲು ಮುಂದಾಗಬೇಕು.
– ಸಹನಶೀಲ ಪೈ, ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷರು, ಉಡುಪಿ

ಜಾಗೃತಿ ಕಾರ್ಯಕ್ರಮ
ಸರಕಾರದ ಆದೇಶದಂತೆ ಎಲ್ಲರೂ ಹಸುರು ಪಟಾಕಿಯನ್ನು ಮಾತ್ರ ಬಳಸಬೇಕು. ಮಂಡಳಿಯಿಂದ ಪರಿಸರಸ್ನೇಹಿ ಹಬ್ಬವನ್ನಾಗಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. –
ವಿಜಯಾ ಹೆಗಡೆ, ಪರಿಸರಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಉಡುಪಿ

Advertisement

50 ಮಂದಿ ಅರ್ಜಿ
ಉಡುಪಿ ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ಕೋರಿ 50 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸರಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ನ. 13ರಿಂದ 17ರ ವರೆಗೆ ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. – ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next